ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಡಗೋಡ ಪಟ್ಟಣದ ಪ್ರತಿಷ್ಠಿತ ಪಿಎಂಶ್ರೀ ಶಾಸಕರ ಮಾದರಿ ಶಾಲೆಯಲ್ಲಿ ಶುಕ್ರವಾರ ಬಿಸಿಯೂಟ ಸೇವಿಸಿದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಪೋಷಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಬಿಸಿಯೂಟದಲ್ಲಿ ಇಲಿಯ ಹಿಕ್ಕೆ ಕಂಡುಬಂದಿರುವುದೇ ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳಲು ಕಾರಣ ಎಂದು ಶಂಕಿಸಲಾಗಿದೆ.
ಶಾಲೆಯಲ್ಲಿ ಒಟ್ಟು 452 ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಸೇವಿಸಿದ್ದು, ಇವರ ಪೈಕಿ 41ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಊಟವಾದ ಸುಮಾರು ಎರಡು ಗಂಟೆಗಳ ನಂತರ, ಒಬ್ಬ ವಿದ್ಯಾರ್ಥಿ ವಾಂತಿ ಮಾಡಿಕೊಂಡ ವಿಷಯ ಶಾಲೆಯಲ್ಲಿ ವೇಗವಾಗಿ ಹರಡಿತು. ಆರಂಭದಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳು ಹೊಟ್ಟೆನೋವು ಮತ್ತು ವಾಂತಿ ಬರುತ್ತಿದೆ ಎಂದು ಶಿಕ್ಷಕರಿಗೆ ಹೇಳಿಕೊಂಡಿದ್ದಾರೆ.
ತಕ್ಷಣದ ಕ್ರಮ: ಅಸ್ವಸ್ಥಗೊಂಡ ವಿದ್ಯಾರ್ಥಿಗಳಲ್ಲಿ ಒಬ್ಬರು ತಮ್ಮ ಪೋಷಕರಿಗೆ ವಿಷಯ ತಿಳಿಸಿದ ಕೂಡಲೇ, ಪಾಲಕರು ಶಾಲೆಗೆ ಧಾವಿಸಿ, ಶಿಕ್ಷಕರ ಜತೆಗೂಡಿ ಮಕ್ಕಳನ್ನು ತಕ್ಷಣವೇ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಜೆಯಾಗುತ್ತಿದ್ದಂತೆ ಹೆಚ್ಚಿನ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ತಾಲೂಕು ವೈದ್ಯಾಧಿಕಾರಿಗಳ ತಂಡವು ಶಾಲೆಗೆ ಭೇಟಿ ನೀಡಿದೆ. ಬಿಸಿಯೂಟ ತಯಾರಿಸಿದ ಅಡುಗೆ, ಬಳಸಿದ ಆಹಾರ ಪದಾರ್ಥಗಳು ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ತಹಶೀಲ್ದಾರ ಶಂಕರ ಗೌಡಿ, ಇಒ ಟಿವೈ ದಾಸನಕೊಪ್ಪ, ಮುಖ್ಯಾಧಿಕಾರಿ ಸಂತೋಷಕುಮಾರ ಎಚ್, ಸಿಪಿಐ ರಂಗನಾಥ ನೀಲಮ್ಮನವರ ಸೇರಿದಂತೆ ಶಿಕ್ಷಣ ಮತ್ತು ಆಡಳಿತ ಇಲಾಖೆಯ ಉನ್ನತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ತಮ್ಮ ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ತಾಲೂಕಾ ಆಸ್ಪತ್ರೆಗೆ ಬಂದ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇದು ಎರಡನೇ ಬಾರಿಯಾಗಿದೆ. ಮಕ್ಕಳಿಗೆ ಏನಾದರೂ ಆದರೆ ಯಾರು ಹೊಣೆ?” ಎಂದು ಪ್ರಶ್ನಿಸಿ ಶಿಕ್ಷಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಶಾಸಕರು, ಮಾಜಿ ಶಾಸಕರ ಭೇಟಿ
ವಿಷಯ ತಿಳಿದ ಶಾಸಕ ಶಿವರಾಮ ಹೆಬ್ಬಾರ ಹಾಗೂ ಮಾಜಿ ಶಾಸಕ ವಿ.ಎಸ್. ಪಾಟೀಲರು ಶುಕ್ರವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಶಾಸಕರು ಸೂಚಿಸಿದರು.
“ಸದ್ಯ ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಪೋಷಕರು ಭಯಪಡುವ ಅಗತ್ಯವಿಲ್ಲ, ನಿಮ್ಮ ಜತೆ ನಾನಿದ್ದೇನೆ ಮತ್ತು ಸರ್ಕಾರವಿದೆ. ವರದಿ ಬಂದ ನಂತರ ಬಿಸಿಯೂಟದ ಆಹಾರದಲ್ಲಿ ಏನಾದರೂ ದೋಷ ಸಾಬೀತಾದರೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ವೈದ್ಯಾಧಿಕಾರಿ ಹೇಳಿಕೆ: ತಾಲೂಕು ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ ಮಾತನಾಡಿ, “ಸದ್ಯ 41 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ. ನಿಖರ ಕಾರಣ ತಿಳಿಯಲು ಊಟದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ 24 ಗಂಟೆಗಳ ಕಾಲ ಮಕ್ಕಳ ಮೇಲೆ ನಿಗಾ ಇಡಲಾಗಿದೆ” ಎಂದಿದ್ದಾರೆ.

