Sunday, December 14, 2025

ಕ್ರಿಕೆಟ್​ ಲೋಕದಲ್ಲಿ ಸ್ಕಾಟ್​ ಎಡ್ವರ್ಡ್ಸ್​ ಅಬ್ಬರ: ಟಿ20ಯಲ್ಲಿ ವಿಶ್ವದಾಖಲೆಯ ದ್ವಿಶತಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆದರ್​ಲೆಂಡ್ಸ್​ ತಂಡದ ನಾಯಕ ಸ್ಕಾಟ್​ ಎಡ್ವರ್ಡ್ಸ್​ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಗ್ರೇಡ್ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಬ್ಯಾಟಿಂಗ್​ ಸುನಾಮಿ ಸೃಷ್ಟಿಸಿರುವ ಎಡ್ವರ್ಡ್ಸ್, ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಆಲ್ಟೋನಾ ಸ್ಪೋರ್ಟ್ಸ್ ಪರ ವಿಲಿಯಮ್ಸ್ ಲ್ಯಾಂಡಿಂಗ್ ಎಸ್​ಸಿ ತಂಡದ ವಿರುದ್ಧದ ಪಂದ್ಯದಲ್ಲಿ, ಆರಂಭಿಕರಾಗಿ ಕಣಕ್ಕಿಳಿದ ಎಡ್ವರ್ಡ್ಸ್​ ಸಿಡಿಲಬ್ಬರದ ಬ್ಯಾಟಿಂಗ್​ಗೆ ಸಾಕ್ಷಿಯಾದರು. ಶತಕ ಪೂರೈಸಿದ ಬಳಿಕ ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು ಕೇವಲ 81 ಎಸೆತಗಳಲ್ಲಿ ಅಜೇಯ 229 ರನ್ ಬಾರಿಸಿ ವಿಲಿಯಮ್ಸ್ ಲ್ಯಾಂಡಿಂಗ್ ಬೌಲರ್​ಗಳಿಗೆ ನಿದ್ದೆಗೆಡಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 14 ಆಕರ್ಷಕ ಬೌಂಡರಿಗಳು ಮತ್ತು 23 ದೈತ್ಯ ಸಿಕ್ಸರ್‌ಗಳು ಸೇರಿದ್ದವು!

ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆ ಈ ಮೊದಲು ಸಾಗರ್ ಕುಲ್ಕರ್ಣಿ ಅವರ ಹೆಸರಿನಲ್ಲಿತ್ತು. ಸಿಂಗಾಪುರ್​ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮರೀನಾ ಕ್ಲಬ್​ ಪರ ಆಡಿದ್ದ ಸಾಗರ್ ಕುಲ್ಕರ್ಣಿ 56 ಎಸೆತಗಳಲ್ಲಿ 219 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಆದರೆ, ಈಗ ನೆದರ್​ಲೆಂಡ್ಸ್​ನ ಸ್ಟಾರ್​ ಆಟಗಾರ ಸ್ಕಾಟ್ ಎಡ್ವರ್ಡ್ಸ್​ ಕೇವಲ 10 ರನ್‌ಗಳ ಅಂತರದಲ್ಲಿ ಆ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಎಡ್ವರ್ಡ್ಸ್ ಅವರ ಈ ಐತಿಹಾಸಿಕ ದ್ವಿಶತಕದ ನೆರವಿನಿಂದ ಆಲ್ಟೋನಾ ಸ್ಪೋರ್ಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಬೃಹತ್ ಮೊತ್ತವಾದ 302 ರನ್‌ಗಳನ್ನು ಕಲೆಹಾಕಿತು. ಈ ಗುರಿ ಬೆನ್ನತ್ತಿದ ವಿಲಿಯಮ್ಸ್ ಲ್ಯಾಂಡಿಂಗ್ ಎಸ್​ಸಿ ತಂಡವು ಕೇವಲ 118 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆಲ್ಟೋನಾ ಸ್ಪೋರ್ಟ್ಸ್ ತಂಡವು 186 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

error: Content is protected !!