March 22, 2026
Sunday, March 22, 2026
spot_img

ಒಂದೆಡೆ ಭದ್ರತಾ ಭೀತಿ, ಇನ್ನೊಂದೆಡೆ ಐಪಿಎಲ್ ಕ್ರೇಜ್: ದಿಕ್ಕೆಟ್ಟ ಪಾಕಿಸ್ತಾನ ಕ್ರಿಕೆಟ್ ಮಂಡಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ 26 ರಿಂದ ಆರಂಭವಾಗಬೇಕಿದ್ದ ಪಾಕಿಸ್ತಾನ ಸೂಪರ್ ಲೀಗ್‌ ನ 11ನೇ ಸೀಸನ್ ಆರಂಭಕ್ಕೂ ಮುನ್ನವೇ ಸಾಲು ಸಾಲು ವಿಘ್ನಗಳನ್ನು ಎದುರಿಸುತ್ತಿದೆ. ದೇಶದ ಭದ್ರತಾ ಪರಿಸ್ಥಿತಿ ಹಾಗೂ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಡೀ ಪಂದ್ಯಾವಳಿಯನ್ನು ಪ್ರೇಕ್ಷಕರಿಲ್ಲದೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

ಈ ಮೊದಲು ಆರು ವಿವಿಧ ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸಲು ಯೋಜಿಸಲಾಗಿತ್ತು. ಆದರೆ ಈಗಿನ ತುರ್ತು ಪರಿಸ್ಥಿತಿಯಿಂದಾಗಿ ಕೇವಲ ಲಾಹೋರ್ ಮತ್ತು ಕರಾಚಿಯಲ್ಲಿ ಮಾತ್ರ ಪಂದ್ಯಗಳು ನಡೆಯಲಿವೆ. ಈ ಬಾರಿ ಎಂಟು ತಂಡಗಳು ಕಣಕ್ಕಿಳಿಯುತ್ತಿರುವುದರಿಂದ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿತ್ತು, ಆದರೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವ ನಿರ್ಧಾರ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.

ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಪಾಕಿಸ್ತಾನದಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟು ತೀವ್ರಗೊಂಡಿದೆ. ಸಾರಿಗೆ ವೆಚ್ಚವನ್ನು ತಗ್ಗಿಸಲು ಮತ್ತು ಇಂಧನ ಉಳಿಸಲು ಕೇವಲ ಎರಡು ನಗರಗಳಲ್ಲಿ ಪಂದ್ಯ ಆಯೋಜಿಸಿದ್ದೇವೆ. ಪಂದ್ಯಾವಳಿಯನ್ನು ಮುಂದೂಡುವ ಆಯ್ಕೆ ಇತ್ತಾದರೂ, ಮುಂದೆ ಸಮಯದ ಅಭಾವವಿರುವುದರಿಂದ ಈಗಲೇ ನಡೆಸುತ್ತಿದ್ದೇವೆ,” ಎಂದಿದ್ದಾರೆ.

ಪಿಎಸ್ಎಲ್‌ಗೆ ಅತಿದೊಡ್ಡ ಪೆಟ್ಟು ಬಿದ್ದಿರುವುದು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ. ಐಪಿಎಲ್‌ನಲ್ಲಿ ಕೆಲವು ಆಟಗಾರರು ಗಾಯಗೊಂಡು ಹೊರಬಿದ್ದಿರುವುದರಿಂದ, ಅಲ್ಲಿ ಬದಲಿ ಆಟಗಾರರಾಗಿ ಅವಕಾಶ ಪಡೆಯಲು ಪಿಎಸ್ಎಲ್ ಒಪ್ಪಂದ ಮಾಡಿಕೊಂಡಿದ್ದ ವಿದೇಶಿ ಆಟಗಾರರು ಈಗ ಪಾಕಿಸ್ತಾನದಿಂದ ಹಿಂದೆ ಸರಿಯುತ್ತಿದ್ದಾರೆ. ಹೆಚ್ಚಿನ ಹಣ ಮತ್ತು ಖ್ಯಾತಿ ತಂದುಕೊಡುವ ಐಪಿಎಲ್ ಕಡೆಗೆ ಆಟಗಾರರು ಒಲವು ತೋರುತ್ತಿರುವುದು ಪಾಕ್ ಲೀಗ್‌ಗೆ ನುಂಗಲಾರದ ತುತ್ತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !