ಪ್ರತಿಯೊಬ್ಬರೂ ದಿನದ ಆರಂಭವನ್ನು ಆರೋಗ್ಯಕರ ಉಪಾಹಾರದಿಂದ ಪ್ರಾರಂಭಿಸಲು ಬಯಸುತ್ತಾರೆ. ಸಾಮಾನ್ಯ ಇಡ್ಲಿ, ದೋಸೆ, ಉಪ್ಮಾ ತಿನ್ನುತ್ತಾ ಬೇಸರವಾದಾಗ ಹೊಸ ರುಚಿಯನ್ನು ಪ್ರಯತ್ನಿಸಲು ಸಾಬೂದಾನ ಇಡ್ಲಿ ಒಳ್ಳೆಯ ಆಯ್ಕೆ. ಸಾಬೂದಾನದಿಂದ (ಸಬ್ಬಕ್ಕಿ) ತಯಾರಾಗುವ ಈ ಇಡ್ಲಿ ಜೀರ್ಣಕ್ರಿಯೆಗೆ ಸಹಾಯಕ. ಉಪವಾಸದ ದಿನಗಳಲ್ಲಿ ಅಥವಾ ಸಾಮಾನ್ಯ ದಿನಗಳಲ್ಲಿ ಸಹ ಇದು ರುಚಿಕರವಾದ ಹಾಗೂ ಪೌಷ್ಟಿಕವಾದ ತಿನಿಸು.
ಬೇಕಾಗುವ ಸಾಮಗ್ರಿಗಳು
ಸಾಬೂದಾನ (ಸಬ್ಬಕ್ಕಿ) – 1 ಕಪ್
ಅಕ್ಕಿ ರವೆ – 1 ಕಪ್
ಮೊಸರು – 1 ಕಪ್
ಹಸಿಮೆಣಸಿನಕಾಯಿ – 2 (ಸಣ್ಣದು)
ಶುಂಠಿ – 1 ಟೀ ಸ್ಪೂನ್ (ತುರಿದು)
ಕರಿಬೇವು – ಕೆಲವು
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಟೇಬಲ್ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಬೇಕಿಂಗ್ ಸೋಡಾ – ಸ್ವಲ್ಪ (ಐಚ್ಛಿಕ)
ತಯಾರಿಸುವ ವಿಧಾನ
ಮೊದಲು ಸಾಬೂದಾನವನ್ನು ತೊಳೆದು ಮತ್ತು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನೆನೆಸಿದ ಸಾಬೂದಾನವನ್ನು ಚೆನ್ನಾಗಿ ನೀರು ತೆಗೆದು ಇಟ್ಟುಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ರವೆ, ಮೊಸರು, ಉಪ್ಪು ಸೇರಿಸಿ ಕಲಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ದಪ್ಪ ಹಿಟ್ಟಿನಂತೆ ಕಲಸಿ. ಈಗ ಈ ಹಿಟ್ಟಿಗೆ ನೆನೆಸಿದ ಸಾಬೂದಾನ, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸೇರಿಸಿ.
ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಗೂ ಕರಿಬೇವು ಒಗ್ಗರಣೆ ಹಾಕಿ. ಇದನ್ನು ಹಿಟ್ಟಿಗೆ ಸೇರಿಸಿ. ಬೇಕಾದರೆ ಸ್ವಲ್ಪ ಬೇಕಿಂಗ್ ಸೋಡಾ ಸೇರಿಸಿ ಮಿಶ್ರಣ ಮಾಡಿ. ಈಗ ಇಡ್ಲಿ ತಟ್ಟೆಯಲ್ಲಿ ಎಣ್ಣೆ ಹಚ್ಚಿ, ಹಿಟ್ಟನ್ನು ಹಾಕಿ. ಇಡ್ಲಿ ಕುಕ್ಕರ್‌ನಲ್ಲಿ 15 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಸಾಬೂದಾನ ಇಡ್ಲಿ ರೆಡಿ.