ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಹಿಸಾರ್‌ನಲ್ಲಿರುವ ಐಕಾನಿಕ್ ‘ಒಪಿ ಜಿಂದಾಲ್ ಟವರ್’ ಇತ್ತೀಚೆಗೆ ಭಯಾನಕ ಸ್ಟಂಟ್ ಒಂದಕ್ಕೆ ಸಾಕ್ಷಿಯಾಗಿದೆ. ರಾಜಸ್ಥಾನ ಮೂಲದ ಮೋನು ಎಂಬ ಯುವಕ, ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ 282 ಅಡಿ ಎತ್ತರದ ಟವರ್ ಏರಿ ಪ್ರಾಣಾಪಾಯಕಾರಿ ಸಾಹಸ ಪ್ರದರ್ಶಿಸುವ ಮೂಲಕ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದ್ದಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಮೋನು ಟವರ್‌ನ ಹೊರಭಾಗದ ಚೌಕಟ್ಟನ್ನು ಹಿಡಿದು ತಲೆಕೆಳಗಾಗಿ ನೇತಾಡುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ತಾನು ಹೊತ್ತು ತಂದಿದ್ದ ಬಿಯರ್ ಬಾಟಲಿಗಳು ಮತ್ತು ಕ್ಯಾನ್‌ಗಳನ್ನು ಕಬ್ಬಿಣದ ಕಂಬಿಗಳ ಮೇಲೆ ಜೋಡಿಸಿ, ಅವುಗಳ ಮೇಲೆ ನಿಂತು ಸಮತೋಲನ ಕಾಯ್ದುಕೊಳ್ಳುವ ಮೂಲಕ ನೋಡುವವರ ಎದೆಬಡಿತ ಹೆಚ್ಚಿಸಿದ್ದಾನೆ.
ಜನವರಿ 18ರ ಭಾನುವಾರದಂದು ಈ ಘಟನೆ ನಡೆದಿದ್ದು, ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಈ ಯುವಕ ಟವರ್ ಪ್ರವೇಶಿಸಿದ್ದು ಅಧಿಕಾರಿಗಳನ್ನು ಕಂಗಾಲಾಗಿಸಿದೆ. ಆತ ಕೆಳಗೆ ಇಳಿಯುತ್ತಿದ್ದಂತೆ ಜಿಂದಾಲ್ ಟವರ್‌ನ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ವಿಚಾರಣೆಯ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡ ಮೋನು, ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ ಎಂದು ಲಿಖಿತವಾಗಿ ಕ್ಷಮೆಯಾಚಿಸಿದ್ದಾನೆ. ಟವರ್ ಆಪರೇಟರ್ ಕುಲದೀಪ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, “ಯುವಕ ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ” ಎಂದು ತಿಳಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸ್ಥಳೀಯ ಆಡಳಿತ, ಜಿಂದಾಲ್ ಟವರ್‌ನ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಿದೆ.


