Friday, November 21, 2025

ಉಳ್ಳಾಲದ ಬಿಜೆಪಿ ಹಿರಿಯ ಮುಖಂಡೆ ಲಲಿತ ಸುಂದರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಳ್ಳಾಲದ ಬಿಜೆಪಿ ಹಿರಿಯ ಮುಖಂಡೆ, ಉಳ್ಳಾಲ ನಗರಸಭೆಯ ಮಾಜಿ ಸದಸ್ಯರಾದ ಲಲಿತಾ ಸುಂದರ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸಂಜೆ ತೊಕ್ಕೊಟ್ಟಿನ‌ ಅವರ ಸ್ವಗೃಹದಲ್ಲಿ ನಿಧನರಾದರು.

ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು ಉಳ್ಳಾಲ ನಗರಸಭೆಯ ಚುನಾಯಿತ ಸದಸ್ಯರಾಗಿ,ನಾಮ ನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷರಾಗಿದ್ದ ಅವರು ಮಹಿಳಾ ದೌರ್ಜನ್ಯದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು,ನೊಂದ ಮಹಿಳೆಯರಿಗೆ ಜೀವನೋಪಾಯಕ್ಕೆ ದಾರಿ ತೋರಿಸಿದ್ದರು.

ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ಬಳಿಯ ಸ್ವಾಮಿ ಕೊರಗಜ್ಜ ಸೇವಾ ಸಮಿತಿ,ಕೊಲ್ಯ ಶ್ರೀ ಶಾರದೋತ್ಸವ ಸಮಿತಿ,ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ಮಂದಿರ,ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮೊದಲಾದ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.

ತೊಕ್ಕೊಟ್ಟಿನ ಹೃದಯಭಾಗದಲ್ಲೇ ವಾಣಿಜ್ಯ ಕಟ್ಟಡ ಹೊಂದಿರುವ ಅವರು ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ಕಚೇರಿಗೆ ಅದೇ ಕಟ್ಟಡದಲ್ಲೊಂದು ಕೊಠಡಿಯನ್ನ ಉಚಿತವಾಗಿ ನೀಡಿ ಪಕ್ಷಾಭಿಮಾನ ಮೆರೆದಿದ್ದರು.

ಲಲಿತಾ ಸುಂದರ್ ಅವರ ಏಕೈಕ ಮಗ ಸಂತೋಷ್ ಯಾನೆ ಸಂತು ಇಪ್ಪತ್ತೇಳು ವರುಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು.ಹಿರಿಯ ಮೊಮ್ಮಗ ಶಮಿತ್ ಶೆಟ್ಟಿ ಎರಡು ವರುಷದ ಹಿಂದಷ್ಟೆ ಮಂಗಳೂರಿನ ನಂತೂರು ಬಳಿ ನಡೆದಿದ್ದ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು.

ಮೃತ ಲಲಿತಾ ಸುಂದರ್ ಸೊಸೆ,ಮೊಮ್ಮಗಳು ಮತ್ತು ಮರಿ ಮೊಮ್ಮಗನನ್ನ ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರದ ವಿಧಿವಿದಾನಗಳು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ತೊಕ್ಕೊಟ್ಟಿನ ಸ್ವಗೃಹದಲ್ಲಿ ನಡೆಯಲಿದೆ.

ಲಲಿತಾ ಸುಂದರ್ ಅವರ ಅಗಲಿಕೆಗೆ ಸ್ಪೀಕರ್ ಯು.ಟಿ.ಖಾದರ್,ಸಂಸದ ಬ್ರಿಜೇಶ್ ಚೌಟ,ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,ಮಾಜಿ ಶಾಸಕ ಜಯರಾಮ ಶೆಟ್ಟಿ,ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ,ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ,ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು,ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರು,ಚಂದ್ರಹಾಸ್ ಪಂಡಿತ್ ಹೌಸ್ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಸೇರಿದಂತೆ ಹಲವಾರು ರಾಜಕೀಯ,ಸಾಮಾಜಿಕ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!