Thursday, January 8, 2026

ಜಾತಿ ವಿಷಯವಾಗಿ ಸೀನಿಯರ್‌ ಡಾಕ್ಟರ್‌ನಿಂದ ವಂಚನೆ? ಮನನೊಂದು ಕಿರಿಯ ವೈದ್ಯೆ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆಯಾಗುವುದಾಗಿ ಭರವಸೆ ನೀಡಿ, ಬಳಿಕ ಜಾತಿ ವಿಚಾರವಾಗಿ ಹಿರಿಯ ವೈದ್ಯನಿಂದ ವಂಚನೆಗೊಳಗಾದ ಕಾರಣ ಇಲ್ಲಿನ ಸಿದ್ದಿಪೇಟೆ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ 23 ವರ್ಷದ ದಲಿತ ಹೌಸ್​ ಸರ್ಜನ್‌ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದುವೆ ವಿಚಾರದಲ್ಲಿನ ಜಾತಿ ತಾರತಮ್ಯದಿಂದಾಗಿ ಕಿರಿಯ ವೈದ್ಯೆ ನೊಂದು ಜನವರಿ 3ರಂದು ಕಾಲೇಜು ಹಾಸ್ಟೆಲ್‌ನಲ್ಲಿ ಕಳೆನಾಶಕ ಚುಚ್ಚುಮದ್ದು ಹಾಕಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ರೂಮ್‌ಮೇಟ್‌ಗಳು ಸಿದ್ದಿಪೇಟೆಯ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಜ.4ರ ಮುಂಜಾನೆ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ನಿಧನರಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆಯ ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಿಎನ್ಎಸ್ ಮತ್ತು ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ವೈದ್ಯೆ ಜೋಗುಳಾಂಬ-ಗಡ್ವಾಲ್ ಜಿಲ್ಲೆಯ ಬಡ ಕುಟುಂಬಕ್ಕೆ ಸೇರಿದ್ದು, ಸಮಾಜ ಕಲ್ಯಾಣ ಶಾಲೆಯಲ್ಲಿ ಅಧ್ಯಯನ ಮಾಡಿ, 2020ರಲ್ಲಿ ಸಿದ್ದಿಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೇರಿದ್ದರು. ಶೈಕ್ಷಣಿಕ, ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದರು. ಪೋಷಕರು ಕೂಲಿ ಕೆಲಸ ಮಾಡುತ್ತಿದ್ದು, ಸಹೋದರಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.

ಮೃತ ವೈದ್ಯೆ ಸಿದ್ದಿಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಕಳೆದ ವರ್ಷ ಜುಲೈನಲ್ಲಿ ಹಿರಿಯ ವೈದ್ಯನಾಗಿದ್ದ ಆರೋಪಿಯೊಂದಿಗೆ ಪರಿಚಯವಾಗಿತ್ತು. ಆರೋಪಿ ಕಿರಿಯ ವೈದ್ಯೆಗೆ ಮದುವೆಯಾಗುವ ಭರವಸೆ ನೀಡಿದ್ದರು. ಆದರೆ, ಹಿಂದುಳಿದ ವರ್ಗಕ್ಕೆ ಸೇರಿದ ವೈದ್ಯೆಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿ ದೂರ ಮಾಡಿದ್ದ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

error: Content is protected !!