ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ಸಾಹಿತಿ ಕಥೆಗಾರ, ವಿಮರ್ಶಕ, ಚಿಂತಕ ಡಾ.ಮೊಗಳ್ಳಿ ಗಣೇಶ್(62) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಬೆಳಗ್ಗೆ 7:30ರ ಸುಮಾರಿಗೆ ನಿಧನರಾಗಿದ್ದಾರೆ.
ಹಿರಿಯ ಕನ್ನಡ ಸಾಹಿತಿ ಎಸ್.ಎಲ್ ಭೈರಪ್ಪ ನಿಧನದಿಂದ ಈಗಾಗಲೇ ಸಾಹಿತ್ಯ ಲೋಕಕ್ಕೆ ದೊಡ್ಡ ಆಘಾತವಾಗಿದೆ. ಇದೀಗ ಮತ್ತೊಬ್ಬ ಸಾಹಿತಿ ಕನ್ನಡ ಸಾಹಿತ್ಯ ಲೋಕಕ್ಕೆ ವಿದಾಯ ಹೇಳಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ದಲಿತ ಧ್ವನಿಯನ್ನು ಶಕ್ತಿಯುತವಾಗಿ ಎತ್ತಿ ತೋರಿಸಿದ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ ಮತ್ತು ವೈಚಾರಿಕ ವಿಮರ್ಶಕರಾದ ಡಾ. ಮೊಗಳ್ಳಿ ಗಣೇಶ್ ಇನ್ನಿಲ್ಲ.
ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಚಿಕಿತ್ಸೆ ಫಲಕಾರಿಯಾಗದೇ ಡಾ. ಮೊಗಳ್ಳಿ ಗಣೇಶ್ ನಿಧನರಾಗಿದ್ದಾರೆ. ಕಳೆದ ನಾಲ್ಕು ಐದು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ ಡಾ. ಮೊಗಳ್ಳಿ ಗಣೇಶ್ ಇಂದು ಇಹಲೋಕ ತ್ಯಜಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿದ್ದ ಡಾ. ಮೊಗಳ್ಳಿ ಗಣೇಶ್ ನಿಧನವು ಸಾಹಿತ್ಯ, ಶೈಕ್ಷಣಿಕ ಮತ್ತು ದಲಿತ ಸಮುದಾಯದಲ್ಲಿ ಭಾರೀ ದುಃಖವನ್ನುಂಟುಮಾಡಿದೆ. ಇಂದು ಬೆಳಗ್ಗೆ 7:30ಕ್ಕೆ ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಅಂತಿಮ ಸಂಸ್ಕಾರ ಸಂಜೆ 4 ಗಂಟೆಗೆ ಮದ್ದೂರು ಹತ್ತಿರ ಮಾದನಾಯಕನ ಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಡಾ. ಗಣೇಶ್ ಅವರ ಕೃತಿಗಳು ದಲಿತ ಜೀವನದ ದುಃಖ, ಹೋರಾಟ ಮತ್ತು ಸಾಮಾಜಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ಅವರ ಪ್ರಮುಖ ಕೃತಿಗಳಲ್ಲಿ “ಬುಗುರಿ”, “ಮಣ್ಣು”, “ಅತ್ತೆ”, “ಭೂಮಿ”, “ಕನ್ನೆಮಳೆ” ಎಂಬ ಕಥಾ ಸಂಕಲನಗಳು ಸೇರಿವೆ. “ಮೊಗಳ್ಳಿ ಕಥೆಗಳು” ಎಂಬುದು ಅವರ ಆವರೆಗಿನ ಬಹುಪಾಲು ಕಥೆಗಳ ಸಂಕಲನವಾಗಿದ್ದು, ಇದು ದಲಿತ ಸಾಹಿತ್ಯದಲ್ಲಿ ಮೈಲಿಗಲ್ಲಾಗಿದೆ. ಕಾದಂಬರಿಗಳಾದ “ಆದಿಮ” ಮತ್ತು ವಿಮರ್ಶಾ ಕೃತಿಗಳಾದ “ದೇಸಿ ಕಥನ” ಮತ್ತು “ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ” ಅವರ ಚಿಂತನೆಯ ಆಳವನ್ನು ತೋರಿಸುತ್ತವೆ.