Monday, October 20, 2025

ಪ್ರಿಯಾಂಕ್ ‘ಬ್ರೇಕ್’ಗೆ ಹಿರಿಯರ ‘ಸೈಲೆನ್ಸ್’: ಆರ್‌ಎಸ್‌ಎಸ್‌ ವಿಷಯದಲ್ಲಿ ಕಾಂಗ್ರೆಸ್ ಡಬಲ್ ಗೇಮ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಹಾಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ಧಾರವು ಇದೀಗ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ ಎಂಬ ಪ್ರಶ್ನೆ ಎದ್ದಿದೆ.

ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರದಲ್ಲಿ ಮಾತ್ರ ಭಾನುವಾರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ ಸಿಗಲಿಲ್ಲ. ಆದರೆ, ಇದೇ ದಿನ ರಾಜ್ಯದ ಇತರೆ ಹಲವು ಜಿಲ್ಲಾ ಮತ್ತು ನಗರ ಕೇಂದ್ರಗಳಲ್ಲಿ ಯಾವುದೇ ವಿರೋಧವಿಲ್ಲದೆ ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಇದು, ‘ಪ್ರಿಯಾಂಕ್ ನಿರ್ಧಾರ ಬೇರೆ, ನಮ್ಮ ನಿರ್ಧಾರ ಬೇರೆ’ ಎಂಬ ಸಂದೇಶವನ್ನು ರಾಜ್ಯದ ಉಳಿದ ಸಚಿವರು ಮತ್ತು ಶಾಸಕರು ನೀಡಿದ್ದಾರೆ ಎನ್ನುವಂತೆ ಕಂಡುಬಂದಿದೆ. ಬೇರೆ ಯಾವುದೇ ಜಿಲ್ಲೆಗಳಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸ್ಥಳೀಯ ಸಚಿವರು ಮತ್ತು ಶಾಸಕರು ವಿರೋಧ ವ್ಯಕ್ತಪಡಿಸದಿರುವುದು ಈ ಮಾತಿಗೆ ಪುಷ್ಟಿ ನೀಡಿದೆ.

ಹಿರಿಯ ಸಚಿವರ ಅಸಮಾಧಾನ:

ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಕೋರಿ ಬರೆದಿದ್ದ ಪತ್ರವು ಹಿರಿಯ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಡಿನ್ನರ್ ಸಭೆಯಲ್ಲಿ ಹಲವು ಹಿರಿಯ ಸಚಿವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ವರದಿಯಾಗಿದೆ.

ಆರ್‌ಎಸ್‌ಎಸ್‌ಗೆ ನಿರ್ಬಂಧ ಹೇರಿದರೆ, ಇತರ ಧರ್ಮ ಅಥವಾ ಸಂಘಟನೆಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ ಗೊಂದಲ ಉಂಟಾಗುತ್ತದೆ. ಇದರಿಂದ ಸರ್ಕಾರಿ ಅಧಿಕಾರಿಗಳ ಮೇಲೂ ಒತ್ತಡ ಹೆಚ್ಚುತ್ತದೆ. ಒಂದು ವೇಳೆ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದರೆ, ಅದು ಸಂಘಟನೆಗೆ ಮತ್ತಷ್ಟು ಪ್ರಚಾರ ನೀಡಿದಂತಾಗುತ್ತದೆ ಮತ್ತು ಭದ್ರತೆಗಾಗಿ ಪೊಲೀಸ್ ನಿಯೋಜನೆ ಹೆಚ್ಚುತ್ತದೆ ಎಂಬ ಅಭಿಪ್ರಾಯವನ್ನು ಹಿರಿಯ ಸಚಿವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ನಡೆಯುತ್ತಿರುವ ರೀತಿಯಲ್ಲಿಯೇ ಎಲ್ಲವೂ ಸಾಗಲಿ ಎಂಬ ಒಮ್ಮತದ ನಿರ್ಧಾರಕ್ಕೆ ಬಹುತೇಕ ಸಚಿವರು ಬಂದಿರುವುದೇ ಅವರ ‘ಮೌನ’ಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

error: Content is protected !!