Monday, January 12, 2026

ಕೊನೆಯ ಹಂತದಲ್ಲಿ ಹಿನ್ನಡೆ | ಉಡಾವಣೆ ವೇಳೆ ತಾಂತ್ರಿಕ ವ್ಯತ್ಯಯ: PSLV-C62 ಮಿಷನ್ ವಿಫಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ PSLV-C62 ರಾಕೆಟ್‌ನ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯ ಕಂಡುಬಂದಿದೆ. ಈ ಬೆಳವಣಿಗೆಯಿಂದ ಮಿಷನ್ ಸ್ಥಿತಿಗತಿಗಳ ಬಗ್ಗೆ ಇಸ್ರೋ ವಿಜ್ಞಾನಿಗಳು ವಿವರವಾದ ವಿಶ್ಲೇಷಣೆಗೆ ಮುಂದಾಗಿದ್ದಾರೆ.

ಬೆಳಿಗ್ಗೆ 10:18ಕ್ಕೆ ಮೊದಲ ಉಡಾವಣಾ ವೇದಿಕೆಯಿಂದ ರಾಕೆಟ್ ನಿಗದಿತ ಸಮಯಕ್ಕೆ ನಭಕ್ಕೆ ಏರಿತು. ಆರಂಭಿಕ ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದರೂ, ಮೂರನೇ ಹಂತ ಮುಕ್ತಾಯದ ವೇಳೆ ಹಾರಾಟದ ಪಥ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಮಾಹಿತಿ ನೀಡಿದ್ದಾರೆ. ಉಡಾವಣೆಯ ನಂತರದ ಟೆಲಿಮೆಟ್ರಿ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಉಡಾವಣೆಗೆ ಮುನ್ನ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಶನಿವಾರ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು.

2026ರ ಮೊದಲ ಬಾಹ್ಯಾಕಾಶ ಮಿಷನ್ ಆಗಿದ್ದ PSLV-C62, ಇಸ್ರೋನ 101ನೇ ಕಕ್ಷಾ ಉಡಾವಣೆಯ ಗುರಿಯನ್ನೂ ಹೊಂದಿತ್ತು. ಈ ರಾಕೆಟ್ DRDO ಅಭಿವೃದ್ಧಿಪಡಿಸಿದ EOS-N1 ಭೂಪರಿವೀಕ್ಷಣಾ ಉಪಗ್ರಹ ಸೇರಿದಂತೆ 15 ದೇಶಿ ಮತ್ತು ವಿದೇಶಿ ಉಪಗ್ರಹಗಳನ್ನು ಹೊತ್ತೊಯ್ದಿತ್ತು.

260 ಟನ್ ತೂಕ ಮತ್ತು 44 ಮೀಟರ್ ಎತ್ತರ ಹೊಂದಿರುವ PSLV-C62, ಸುಮಾರು 505 ಕಿಲೋಮೀಟರ್ ಎತ್ತರದ ಸೂರ್ಯ-ಸಮಸಮಯ ಕಕ್ಷೆಯಲ್ಲಿ ಉಪಗ್ರಹಗಳನ್ನು ಸ್ಥಾಪಿಸುವ ಯೋಜನೆ ಹೊಂದಿತ್ತು. ಮಿಷನ್ ಪ್ರಗತಿಯ ಅಂತಿಮ ಸ್ಥಿತಿಯನ್ನು ಇಸ್ರೋ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!