ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವು ಭಾಗಗಳಲ್ಲಿ ಚಳಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್, ಕಲಬುರಗಿ, ವಿಜಯನಗರ, ಯಾದಗಿರಿ, ಬೆಳಗಾವಿ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಇಳಿಯುವ ನಿರೀಕ್ಷೆಯಿದೆ.
ಐಎಂಡಿ ಮಾಹಿತಿಯಂತೆ, ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲೂ ಚಳಿ ತೀವ್ರವಾಗಿದ್ದು, ವಿಜಯಪುರದಲ್ಲಿ ಕನಿಷ್ಠ ತಾಪಮಾನ 6.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಹಾಸನದಲ್ಲಿ 7 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕಳೆದ ಕೆಲ ದಿನಗಳಿಂದ ಕನಿಷ್ಠ ತಾಪಮಾನದಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಈ ಪರಿಸ್ಥಿತಿಗೆ ಕರ್ನಾಟಕದ ಒಳನಾಡಿನ ಮೇಲೆ ಈಶಾನ್ಯ ದಿಕ್ಕಿನಿಂದ ಬೀಸುತ್ತಿರುವ ಗಾಳಿಯೂ, ಕರಾವಳಿ ಭಾಗಗಳಲ್ಲಿ ಪೂರ್ವ ದಿಕ್ಕಿನ ಕಡಿಮೆ ಉಷ್ಣವಲಯದ ಗಾಳಿಯೂ ಪ್ರಮುಖ ಕಾರಣವೆಂದು ವಿವರಿಸಲಾಗಿದೆ. ರಾಯಚೂರು, ಬೀದರ್, ವಿಜಯಪುರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈಗಾಗಲೇ ತೀವ್ರ ಶೀತಮಾರುತದ ಅನುಭವವಾಗಿದೆ.
ಚಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಚಳಿಯಿಂದ ರಕ್ಷಿಸಿಕೊಳ್ಳುವಂತೆ ಐಎಂಡಿ ಮನವಿ ಮಾಡಿದೆ.

