ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿ ತೀವ್ರ ಶೀತಗಾಳಿಯಿಂದ ತತ್ತರಿಸಿದ್ದು, ಇಂದಿನಿಂದ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕನಿಷ್ಠ ತಾಪಮಾನ 2.9 ಡಿಗ್ರಿಗಿಳಿದಿದೆ.
ಜ.12 ಹಾಗೂ ಜ.13ರಂದು ತ್ರೀವ ಶೀತಗಾಳಿ ಬೀಸುವ ಸಾಧ್ಯತೆಯಿರುವ ಹಿನ್ನೆಲೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಬೆಳಗಿನ ಜಾವ ಶೀತಗಾಳಿ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ದೆಹಲಿ ಸೇರಿದಂತೆ ಹರಿಯಾಣ, ಚಂಡೀಗಢದ ಹಲವು ಪ್ರದೇಶಗಳಲ್ಲಿ ಮಂಗಳವಾರ (ಜ.13) ಶೀತಗಾಳಿ ಮುಂದುವರಿಯುವ ನಿರೀಕ್ಷೆಯಿದೆ. ಇನ್ನೂ ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲೂ ಚಳಿ ತೀವ್ರವಾಗಿದೆ.
ಇದೆಲ್ಲದರ ಮಧ್ಯೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಭಾನುವಾರ `ಕಳಪೆ’ಯಾಗಿರುವುದು ಕಂಡುಬಂದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 291 ದಾಖಲಾಗಿದೆ. ಜ.12 ರಿಂದ ಜ.14ರವರೆಗೆ ಗಾಳಿಯ ಗುಣಮಟ್ಟ ಕಳಪೆಯಾಗಿರಲಿದೆ ಎಂದು ತಿಳಿಸಿದೆ.



