January16, 2026
Friday, January 16, 2026
spot_img

ಲೈಫ್ ಸೆಟಲ್ ಮಾಡುವ ನೆಪದಲ್ಲಿ ಲೈಂಗಿಕ ಶೋಷಣೆ: ಕಾನೂನು ರಕ್ಷಕನೇ ಅತ್ಯಾಚಾರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸುನಿಲ್ ಅವರ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯ ಗಂಭೀರ ಆರೋಪದೊಂದಿಗೆ ಡಿಜಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಮದುವೆಯಾಗುವ ಮತ್ತು ಉತ್ತಮ ಜೀವನ ಕಲ್ಪಿಸುವ ಸುಳ್ಳು ಆಶ್ವಾಸನೆ ನೀಡಿ ಇನ್ಸ್‌ಪೆಕ್ಟರ್‌ ತಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಆಮಿಷವೊಡ್ಡಿ ಶೋಷಣೆ:

ಇನ್ಸ್‌ಪೆಕ್ಟರ್‌ ಸುನಿಲ್ ಅವರು “ರಿಜಿಸ್ಟರ್ ಮ್ಯಾರೇಜ್ ಆಗುತ್ತೇನೆ, ಮನೆ ಕೊಡಿಸುತ್ತೇನೆ, ಬ್ಯೂಟಿ ಪಾರ್ಲರ್ ಓಪನ್ ಮಾಡಿಸಿಕೊಡುತ್ತೇನೆ, ನಿಮ್ಮ ಲೈಫ್ ಸೆಟಲ್ ಮಾಡುತ್ತೇನೆ” ಎಂದು ನಂಬಿಸಿ ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ದೂರುದಾರರು ವಿವರಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡು-ಮೂರು ಬಾರಿ ಡಿ.ಜೆ. ಹಳ್ಳಿಯ 8ನೇ ಮೈಲಿಯಲ್ಲಿರುವ ತಮ್ಮ ಮನೆ ಹಾಗೂ ಹೋಟೆಲ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಲೆ ಮತ್ತು ಬ್ಲಾಕ್‌ಮೇಲ್ ಬೆದರಿಕೆ:

ಇಷ್ಟಕ್ಕೆ ಸುಮ್ಮನಾಗದ ಇನ್ಸ್‌ಪೆಕ್ಟರ್‌, ಈ ವಿಷಯವನ್ನು ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ, ಅವರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದೂ ಹೇಳಿದ್ದಾರೆ. ಪದೇ ಪದೇ ವಿಡಿಯೋ ಕಾಲ್ ಮಾಡುವಂತೆ ಪೀಡಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.

ಸಂತ್ರಸ್ತ ಮಹಿಳೆಯು ಈ ಎಲ್ಲಾ ಘಟನೆಗಳನ್ನು ವಿವರಿಸಿ ಡಿಜಿ ಕಚೇರಿಗೆ ದೂರು ನೀಡಿದ್ದು, ತನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಕಾನೂನು ರಕ್ಷಕನೇ ಭಕ್ಷಕನಾದ ಈ ಪ್ರಕರಣವು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

Must Read

error: Content is protected !!