January15, 2026
Thursday, January 15, 2026
spot_img

ನವೆಂಬರ್ ತಿಂಗಳ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿ ಮುಡಿಗೇರಿಸಿಕೊಂಡ ಶಫಾಲಿ ವರ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ವಿಶ್ವಕಪ್ ಪಂದ್ಯ ಕೆಲವೊಮ್ಮೆ ಆಟಗಾರರ ಜೀವನವನ್ನೇ ಬದಲಾಯಿಸಿಬಿಡುತ್ತೆ. ಆರಂಭದಲ್ಲಿ ತಂಡದ ಪಟ್ಟಿಯಲ್ಲೇ ಸ್ಥಾನ ಪಡೆಯಲಾಗದೆ ನಿರಾಶೆ ಅನುಭವಿಸಿದ್ದ ಶಫಾಲಿ ವರ್ಮಾ, ಸಿಕ್ಕ ಅನಿರೀಕ್ಷಿತ ಅವಕಾಶವನ್ನು ಸುವರ್ಣಾವಕಾಶವಾಗಿ ಪರಿವರ್ತಿಸಿ ಇದೀಗ ಐಸಿಸಿ ಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಈ ಸಾಧನೆ ವಿಶೇಷ ಗಮನ ಸೆಳೆದಿದೆ.

ಭಾರತ ಮಹಿಳಾ ತಂಡ ಚೊಚ್ಚಲ ಏಕದಿನ ವಿಶ್ವಕಪ್ ಜಯ ಸಾಧಿಸಿದ ಟೂರ್ನಿಯಲ್ಲಿ, ಗಾಯದ ಕಾರಣ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಹೊರಬಿದ್ದ ಬಳಿಕ ಶಫಾಲಿಗೆ ತಂಡಕ್ಕೆ ಪ್ರವೇಶ ದೊರಕಿತ್ತು. ಟೂರ್ನಿಯ ಕೊನೆಯ ಹಂತದಲ್ಲಿ ತಂಡ ಸೇರಿಕೊಂಡ ಶಫಾಲಿ, ಆರಂಭದಲ್ಲಿ ಹೆಚ್ಚು ಮಿಂಚಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಅವರ ಬ್ಯಾಟ್ ಸಂಪೂರ್ಣವಾಗಿ ಮಾತನಾಡಿತು. 78 ಎಸೆತಗಳಲ್ಲಿ 87 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡುವ ಮೂಲಕ ಅವರು ಭಾರತದ ಗೆಲುವಿಗೆ ಅಡಿಪಾಯ ಹಾಕಿದರು. ಸ್ಮೃತಿ ಮಂಧಾನ ಅವರೊಂದಿಗೆ ಶತಕದ ಆರಂಭಿಕ ಜೊತೆಯಾಟವೂ ಪಂದ್ಯದ ದಿಕ್ಕು ತಿರುಗಿಸಿತು.

ಇದಷ್ಟೇ ಅಲ್ಲದೆ, ಫೈನಲ್‌ನಲ್ಲಿ ಶಫಾಲಿ ಬೌಲಿಂಗ್‌ನಲ್ಲೂ ಮಹತ್ವದ ಕೊಡುಗೆ ನೀಡಿದರು. ಏಳು ಓವರ್‌ಗಳಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಈ ಸಮಗ್ರ ಪ್ರದರ್ಶನಕ್ಕೆ ಗೌರವವಾಗಿ, ಶಫಾಲಿ ವರ್ಮಾಗೆ ನವೆಂಬರ್ ತಿಂಗಳ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ, ಈ ಗೌರವವನ್ನು ತಂಡ, ತರಬೇತುದಾರರು ಮತ್ತು ಕುಟುಂಬಕ್ಕೆ ಅರ್ಪಿಸುತ್ತೇನೆ ಎಂದು ಶಫಾಲಿ ಹೇಳಿದ್ದಾರೆ.

Most Read

error: Content is protected !!