ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಕದಿನ ಸರಣಿಗಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಅಭ್ಯಾಸ ನಡೆಸುತ್ತಿರುವ ನಡುವೆಯೇ, ಕೆಲವು ಫಿಟ್ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬ ಅಪಸ್ವರಗಳು ಕೇಳಿಬರುತ್ತಿವೆ. ಈ ವಿವಾದಕ್ಕೆ ಸಂಬಂಧಿಸಿದಂತೆ, ವೇಗಿ ಮೊಹಮ್ಮದ್ ಶಮಿ ಅವರು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ, ತಂಡದ ಮುಖ್ಯ ಆಯ್ಕೆದಾರರಾದ ಅಜಿತ್ ಅಗರ್ಕರ್ ಅವರು ಶಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಶಮಿ ಫಿಟ್ ಇಲ್ಲ, ಅದಕ್ಕೆ ಆಯ್ಕೆ ಆಗಿಲ್ಲ: ಒಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಗರ್ಕರ್, “ಯಾವುದೇ ಆಟಗಾರರು ಫಿಟ್ ಆಗಿದ್ದರೆ ಅವರು ಖಂಡಿತಾ ತಂಡದಲ್ಲಿರುತ್ತಿದ್ದರು. ಮೊಹಮ್ಮದ್ ಶಮಿ ಫಿಟ್ ಇಲ್ಲ, ಹೀಗಾಗಿ ತಂಡಕ್ಕೆ ಆಯ್ಕೆ ಆಗಿಲ್ಲ. ಅವರು ಏನು ಹೇಳಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ. ಶಮಿ ಇಲ್ಲಿದ್ದರೂ ನನ್ನ ಉತ್ತರ ಒಂದೇ ಆಗಿರುತ್ತದೆ” ಎಂದು ಸ್ಪಷ್ಟಪಡಿಸಿದರು.
‘ಶಮಿ ಕರೆ ಮಾಡಬಹುದಿತ್ತು’: ಸಾಮಾಜಿಕ ಜಾಲತಾಣಗಳಲ್ಲಿ ಶಮಿ ನೀಡಿದ ಹೇಳಿಕೆ ಬಗ್ಗೆ ತನಗೆ ಖಚಿತತೆ ಇಲ್ಲ ಎಂದ ಅಗರ್ಕರ್, “ಒಂದು ವೇಳೆ ನಾನು ಅದನ್ನು ನೋಡಿದ್ದರೆ ಅವರಿಗೆ ನಾನೇ ಫೋನ್ ಮಾಡುತ್ತಿದ್ದೆ. ನನ್ನ ಫೋನ್ ಎಲ್ಲಾ ಆಟಗಾರರಿಗೂ ಯಾವಾಗಲೂ ಆನ್ ಆಗಿರುತ್ತದೆ. ಕಳೆದ ಕೆಲವು ತಿಂಗಳ ಹಿಂದೆ ನಾನು ಶಮಿ ಜೊತೆ ಮಾತನಾಡಿದ್ದೇನೆ. ಆದರೆ ಅದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ” ಎಂದರು.
ಶಮಿ ಅವರ ಸಾಧನೆಗಳನ್ನು ಕೊಂಡಾಡಿದ ಅಗರ್ಕರ್, “ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಶಮಿ ಫಿಟ್ ಆಗಿದ್ದರೆ, ಈಗ ಅವರು ಆಸ್ಟ್ರೇಲಿಯಾ ವಿಮಾನ ಏರುತ್ತಿದ್ದರು. ದುರದೃಷ್ಟವಶಾತ್, ಅವರು ಅಂದು ಫಿಟ್ ಇರಲಿಲ್ಲ” ಎಂದು ವಿವರಿಸಿದರು.
ರಣಜಿ ಪಂದ್ಯಗಳಲ್ಲಿ ಫಿಟ್ನೆಸ್ ಪರೀಕ್ಷೆ: ಶಮಿ ಅವರ ಫಿಟ್ನೆಸ್ ಬಗ್ಗೆ ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ತಿಳಿದುಬರುತ್ತದೆ ಎಂದು ಅಗರ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ರಣಜಿ ಸೀಸನ್ ಈಗಷ್ಟೇ ಶುರುವಾಗಿದೆ. ರಣಜಿಯಲ್ಲಿ ಒಂದೆರಡು ಪಂದ್ಯಗಳನ್ನು ಆಡಿದರೆ ಶಮಿ ಅವರ ಫಿಟ್ನೆಸ್ ಏನು ಎಂಬುದು ನಮಗೆ ಗೊತ್ತಾಗುತ್ತದೆ. ಅವರು ಫಿಟ್ ಆಗಿದ್ದರೆ, ಅಂತಹ ಉತ್ತಮ ಆಟಗಾರನನ್ನು ನಾವು ಯಾಕೆ ಕಡೆಗಣಿಸುತ್ತೇವೆ? ಖಂಡಿತಾ ತಂಡಕ್ಕೆ ಆಯ್ಕೆ ಮಾಡೇ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಆಸ್ಟ್ರೇಲಿಯಾ ಪ್ರವಾಸಕ್ಕೆ ಶಮಿ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಇಂಗ್ಲೆಂಡ್ ಪ್ರವಾಸದ ನಂತರವೂ ಅವರು ಫಿಟ್ ಇರಲಿಲ್ಲ ಎಂಬ ಕಾರಣದಿಂದ ಆಯ್ಕೆ ಸಾಧ್ಯವಾಗಲಿಲ್ಲ ಎಂದು ಅಗರ್ಕರ್ ತಿಳಿಸಿದರು.