Saturday, November 1, 2025

‘ಒನ್‌ ಮ್ಯಾನ್‌ ಆರ್ಮಿ’ ಆದ ಶರ್ಮಾ: ಕಳಪೆ ಆರಂಭದ ನಡುವೆ ಅಬ್ಬರದ ಬ್ಯಾಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಭರ್ಜರಿ ಅರ್ಧಶತಕ ಸಿಡಿಸಿದರು. ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಅಭಿಷೇಕ್, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕೇವಲ 23 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಆರನೇ ಟಿ20 ಅರ್ಧಶತಕವನ್ನು ಪೂರೈಸಿದರು.

ಕಳಪೆ ಆರಂಭದ ನಂತರ ಏಕಾಂಗಿ ಹೋರಾಟ:

ಭಾರತ ತಂಡವು ಕೇವಲ 49 ರನ್‌ಗಳಿಗೆ ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರಂತಹ ಸ್ಟಾರ್ ಬ್ಯಾಟರ್‌ಗಳು ಸೇರಿದಂತೆ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 7.3 ಓವರ್‌ಗಳಲ್ಲಿ ಈ ಆಘಾತ ಎದುರಾಗಿತ್ತು.

ತಂಡದ ಹೀನಾಯ ಸ್ಥಿತಿಯ ನಡುವೆಯೂ ದಿಟ್ಟತನ ತೋರಿದ ಅಭಿಷೇಕ್, ಆಸೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆರಂಭಿಕ 49 ರನ್‌ಗಳಲ್ಲಿ 34 ರನ್‌ಗಳನ್ನು ಕೇವಲ 13 ಎಸೆತಗಳಲ್ಲಿ ಗಳಿಸಿ ತಾವು ಅಂದುಕೊಂಡಿದ್ದನ್ನು ಮಾಡಿ ತೋರಿಸಿದರು.

ಹರ್ಷಿತ್ ರಾಣಾ ಜೊತೆ ಅಮೂಲ್ಯ ಜೊತೆಯಾಟ:

ನಂತರ ಹರ್ಷಿತ್ ರಾಣಾ ಅವರೊಂದಿಗೆ ಇನ್ನಿಂಗ್ಸ್‌ಗೆ ಸ್ಥಿರತೆ ತಂದ ಅಭಿಷೇಕ್, ತಂಡವನ್ನು ಅಪಾಯದಿಂದ ಪಾರು ಮಾಡಿದರು. ಈ ಜೋಡಿ ಆರನೇ ವಿಕೆಟ್‌ಗೆ 56 ರನ್‌ಗಳ ಮಹತ್ವದ ಜೊತೆಯಾಟ ನೀಡಿ ಭಾರತ ತಂಡದ ಮೊತ್ತವನ್ನು 100 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು.

ಈ ಇನ್ನಿಂಗ್ಸ್ ಆಸ್ಟ್ರೇಲಿಯಾ ವಿರುದ್ಧ ಮತ್ತು ಆಸ್ಟ್ರೇಲಿಯಾದ ನೆಲದಲ್ಲಿ ಅಭಿಷೇಕ್ ಅವರಿಗೆ ಮೊದಲ ಅರ್ಧಶತಕ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಅವರು 13ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದರು.

ಫಲಿಸದ ಹೋರಾಟ:

ಸಂಜು ಸ್ಯಾಮ್ಸನ್ ನಂತರ ಇತರ ಬ್ಯಾಟರ್‌ಗಳು ಇನ್ನೊಂದು ತುದಿಯಲ್ಲಿ ವಿಕೆಟ್‌ ಕಳೆದುಕೊಳ್ಳುತ್ತಾ ಹೋದರೂ, ಅಭಿಷೇಕ್ ತಮ್ಮ ಹೋರಾಟವನ್ನು ಮುಂದುವರಿಸಿದರು. ಅಂತಿಮವಾಗಿ, 19ನೇ ಓವರ್‌ನಲ್ಲಿ ಅಭಿಷೇಕ್ ಅವರ ವಿಕೆಟ್ ಪತನವಾಯಿತು. ಅಭಿಷೇಕ್ ಕೇವಲ 37 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ ಒಟ್ಟು 68 ರನ್ ಗಳಿಸಿ ಅಸಾಧಾರಣ ಇನ್ನಿಂಗ್ಸ್ ಆಡಿದರು. ಅವರ ಹೋರಾಟದ ನಡುವೆಯೂ ಟೀಂ ಇಂಡಿಯಾ ಅಂತಿಮವಾಗಿ 125 ರನ್‌ಗಳಿಗೆ ಆಲೌಟ್ ಆಯಿತು.

error: Content is protected !!