ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ಅಬ್ಬರದ ನಡುವೆಯೇ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಕಹಿ ಅನುಭವವಾಗಿದೆ. ಮಲಪ್ಪುರಂ ಜಿಲ್ಲೆಯ ವಂಡೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಕಿಡಿಗೇಡಿಗಳ ಗುಂಪೊಂದು ತರೂರ್ ಅವರ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಎ.ಪಿ. ಅನಿಲ್ ಕುಮಾರ್ ಪರ ಮತಯಾಚನೆ ಮಾಡಲು ಶಶಿ ತರೂರ್ ಅವರು ವಂಡೂರಿನ ಚೆಲ್ಲಿತೋಡೆಗೆ ಆಗಮಿಸಿದ್ದರು. ಸಂಜೆ ಸುಮಾರು 7 ಗಂಟೆಯ ವೇಳೆಗೆ ಬೈಕ್ಗಳಲ್ಲಿ ಬಂದ ಗುಂಪೊಂದು ಸಂಸದರ ಬೆಂಗಾವಲು ವಾಹನವನ್ನು ತಡೆದಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತರೂರ್ ಅವರ ಮೇಲೆ ಹಲ್ಲೆಗೆ ಮುಂದಾದಾಗ, ಅವರನ್ನು ರಕ್ಷಿಸಲು ಬಂದ ಗನ್ಮ್ಯಾನ್ ಮೇಲೂ ದಾಳಿ ನಡೆಸಲಾಗಿದೆ.
ಈ ದಾಳಿಗೆ ಸಂಬಂಧಿಸಿದಂತೆ ಗನ್ಮ್ಯಾನ್ ನೀಡಿದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಳಿಕಾವು ನಿವಾಸಿ ಉಮರ್ ಎಂಬಾತ ಸೇರಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ದಾಳಿಕೋರರು ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಉಳಿದ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇದು ಉದ್ದೇಶಪೂರ್ವಕವಾಗಿ ತೊಂದರೆ ನೀಡುವ ಪ್ರಯತ್ನದಂತೆ ಕಾಣುತ್ತಿದೆ. ಆದರೆ ಇದರ ಹಿಂದೆ ಯಾವುದಾದರೂ ರಾಜಕೀಯ ಪಿತೂರಿ ಇದೆಯೇ ಅಥವಾ ಹಳೆಯ ದ್ವೇಷ ಕಾರಣವೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.



