January 30, 2026
Friday, January 30, 2026
spot_img

ಮೊದಲ ಪತಿಗೆ ಕೈಕೊಟ್ಟು 2ನೇ ಮದುವೆ,ಅಲ್ಲಿ ಲಕ್ಷಾಂತರ ರೂ. ವಂಚಿಸಿ ಮತ್ತೊಬ್ಬನ ಜೊತೆ ಎಸ್ಕೇಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮಹಿಳೆಯೊಬ್ಬಳು, ಹಣವಿರುವವರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಘಟನೆ ನಡೆದಿದೆ.

ಸುಧಾರಾಣಿ ಎಂಬ ಮಹಿಳೆ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ತನ್ನ ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ. ಮೊದಲ ಹಾಗೂ ಎರಡನೇ ಪತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ, ದಾಂಪತ್ಯ ಜೀವನದ ನಡುವೆಯೇ ಪತಿಗೆ ‘ಕಾರು ಮತ್ತು ಬುಲೆಟ್ ಬೈಕ್‌ ಓಡಿಸಲು ಬರಲ್ಲ’ ಎಂಬ ಕ್ಷುಲ್ಲಕ ಕಾರಣ ನೀಡಿ, ಮಕ್ಕಳನ್ನು ಹಾಗೂ ವೀರೆಗೌಡರನ್ನು ತೊರೆದು ಹೋಗಿದ್ದಳು.

ಬಳಿಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬಾತನನ್ನು ಸಂಪರ್ಕಿಸಿದ್ದಳು. ಗಂಡ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿ ಆತನನ್ನು ನಂಬಿಸಿ, ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಳು. ಸುಮಾರು ಒಂದೂಕಾಲು ವರ್ಷಗಳ ಕಾಲ ಅನಂತಮೂರ್ತಿ ಜತೆ ಸಂಸಾರ ಮಾಡಿದ್ದಳು. ಈ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಳು ಎಂದು ಆರೋಪಿಸಲಾಗಿದೆ.

ಅನಂತಮೂರ್ತಿಯಿಂದ ಹಣ ಪಡೆದ ನಂತರ ಆತನನ್ನೂ ತೊರೆದಿರುವ ಸುಧಾರಾಣಿ, ಇದೀಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಸದ್ಯ ದೊಡ್ಡಬಳ್ಳಾಪುರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !