Friday, October 31, 2025

ಆರೋಗ್ಯದಲ್ಲಿ ಏರುಪೇರು: ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿ ಅವರು ತೀವ್ರ ಅನಾರೋಗ್ಯದಿಂದಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಅವರ ಆರೋಗ್ಯದ ಸ್ಥಿತಿ ಕುರಿತು ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಈ ಕಷ್ಟದ ಸಮಯದಲ್ಲಿ, ಮಗಳಾದ ಶಿಲ್ಪಾ ಶೆಟ್ಟಿ ಅವರು ತಾಯಿಯ ಸಂಪೂರ್ಣ ಆರೈಕೆಗಾಗಿ ಆಸ್ಪತ್ರೆಯಲ್ಲೇ ಉಳಿದಿದ್ದಾರೆ.

ಮುಂಬೈನಲ್ಲಿ ಮಗಳು ಶಮಿತಾ ಶೆಟ್ಟಿ ಅವರೊಂದಿಗೆ ವಾಸಿಸುತ್ತಿದ್ದ ಸುನಂದಾ ಶೆಟ್ಟಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವೇ ದಿನಗಳ ಹಿಂದೆ ಶಿಲ್ಪಾ ಶೆಟ್ಟಿ ನಿವಾಸದಲ್ಲಿ ಸುನಂದಾ ಶೆಟ್ಟಿ ಅವರು ಅದ್ದೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಿದ್ದರು.

ತಂದೆಯನ್ನು ಕಳೆದುಕೊಂಡು ಒಂಬತ್ತು ವರ್ಷಗಳ ನಂತರ, ತಾಯಿ ಮತ್ತು ತಂಗಿ ಶಮಿತಾ ಅವರ ಜವಾಬ್ದಾರಿಯನ್ನು ಹೊತ್ತಿರುವ ಶಿಲ್ಪಾ ಶೆಟ್ಟಿ ಅವರಿಗೆ ಈ ಆಸ್ಪತ್ರೆ ವಾಸ ಮತ್ತಷ್ಟು ಒತ್ತಡವನ್ನು ಹೆಚ್ಚಿಸಿದೆ. ಈಗಾಗಲೇ ಪತಿ ರಾಜ್ ಕುಂದ್ರಾ ಅವರ ಮೇಲಿನ 60 ಕೋಟಿ ರೂ. ವಂಚನೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ದಂಪತಿ ಕೋರ್ಟ್ ಮತ್ತು ಪೊಲೀಸ್ ಇಲಾಖೆಯ ಅಂಗಳವನ್ನು ಸುತ್ತುತ್ತಿದ್ದಾರೆ.

ವಂಚನೆ ಪ್ರಕರಣದ ತನಿಖೆ ಜಾರಿಯಲ್ಲಿರುವ ಕಾರಣ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ವಿದೇಶ ಪ್ರಯಾಣದ ಮೇಲೆ ನ್ಯಾಯಾಲಯವು ನಿಷೇಧ ಹೇರಿದೆ. ಇತ್ತೀಚೆಗೆ ವಿದೇಶ ಪ್ರಯಾಣಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿಗೆ, ನ್ಯಾಯಾಲಯವು 60 ಕೋಟಿ ರೂ. ಠೇವಣಿ ಇಡಲು ಸೂಚಿಸಿತ್ತು. ಇದರ ಬೆನ್ನಲ್ಲೇ, ಶಿಲ್ಪಾ ದಂಪತಿ ತಮ್ಮ ಅರ್ಜಿಯನ್ನು ಹಿಂಪಡೆದಿದ್ದರು.

ಒಟ್ಟಾರೆ, ಕಾನೂನು ಸಮರ ಮತ್ತು ಕೋರ್ಟ್ ಕದನದ ನಡುವೆ, ತಾಯಿಯ ಆರೋಗ್ಯವನ್ನು ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ಈಗ ಶಿಲ್ಪಾ ಶೆಟ್ಟಿ ಅವರ ಹೆಗಲೇರಿದೆ.

error: Content is protected !!