Wednesday, December 10, 2025

ʼಜೈ ಮಹಾರಾಷ್ಟ್ರʼ ಸ್ಟಿಕ್ಕರ್‌ ಅಂಟಿಸಿ ಶಿವಸೇನೆ ಕಾರ್ಯಕರ್ತರ ಪುಂಡಾಟ: ಬಸ್​​ ಸಂಚಾರ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇತ್ತ ಎಂಇಎಸ್ ಮತ್ತು ಶಿವಸೇನೆ ನಾಯಕರು ಬಾಲ ಬಿಚ್ಚಿದ್ದಾರೆ.

ಕರ್ನಾಟಕದಲ್ಲಿದ್ದರೂ ಕನ್ನಡ ವಿರೋಧಿ ಘೋಷಣೆ ಕೂಗಿ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳ ನಡೆಸುವ ವಿಫಲ ಯತ್ನ ನಡೆದಿದೆ. ಪರಿಣಾಮವಾಗಿ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ.

ವ್ಯಾಕ್ಸಿನ್ ಡಿಪೋದಲ್ಲಿ ಸೇರಲು ಉದ್ದೇಶಿಸಿದ್ದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಪ್ಲ್ಯಾನ್​​​ಗೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್​​ ಹಾಕಿದೆ. ಇನ್ನು ಕೆಲವರು ರಸ್ತೆ ಮೇಲೆ ಕುಳಿತು ಹೈಡ್ರಾಮಾ ನಡೆಸಿದ್ದಾರೆ. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಕ್ಕೆ ಶಿವಸೇನೆ ಉದ್ದವ್ ಠಾಕ್ರೆ ಬಣದ ಕಾರ್ಯಕರ್ತರು ಕೊಲ್ಲಾಪುರದಲ್ಲಿ ರಾಜ್ಯದ ಸರ್ಕಾರಿ ಬಸ್​​ಗಳನ್ನು ತಡೆದು, ಅವುಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿರುವ ಸ್ಟಿಕ್ಕರ್​​ ಅಂಟಿಸಿ ಗೂಂಡಾ ವರ್ತನೆ ತೋರಿದ್ದಾರೆ.

ವಿಜಯ್ ದೇವಣೆ ನೇತೃತ್ವದಲ್ಲಿ ಈ ರೀತಿ ಪುಂಡಾಟ ನಡೆದ ಬೆನ್ನಲ್ಲೇ, ಅಥಣಿಯಲ್ಲಿ ಮಹಾರಾಷ್ಟ್ರದ ಬಸ್​​ಗಳನ್ನು ತಡೆದು ಕರವೇ ಕಾರ್ಯಕರ್ತರು ಕಿಡಿ ಕಾರಿದ್ದಾರೆ. ಬಸ್​​ಗಳ ಮೇಲೆ ಬಿಳಿ ಬಣ್ಣದಲ್ಲಿ ಜೈ ಕರ್ನಾಟಕ ಎಂದು ಬರೆಯುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ಬಸ್​​ಗಳ ಸಂಚಾರ ಸ್ಥಗಿತ
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್​​ಗಳನ್ನ ತಡೆಯುವ ಕೆಲಸ ಆಗ್ತಿದ್ದಂತೆ ಮುಂಜಾಗೃತಾ ಕ್ರಮವಾಗಿ ಮಹಾರಾಷ್ಟ್ರಕ್ಕೆ ರಾಜ್ಯದಿಂದ ತೆರಳುವ ಎಲ್ಲ ಸರ್ಕಾರಿ ಬಸ್​​ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೊಲ್ಲಾಪುರ, ಪುಣೆ, ಮುಂಬಯಿ ಸೇರಿದಂತೆ ಹಲವೆಡೆ ಸಂಚರಿಸಬೇಕಿದ್ದ ರಾಜ್ಯದ ಬಸ್​​ಗಳ ಸಂಚಾರ ರದ್ದಾಗಿದೆ. ಅತ್ತ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸಬೇಕಿದ್ದ ಸರ್ಕಾರಿ ಬಸ್​ಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ.

error: Content is protected !!