ಹೊಸದಿಗಂತ ವರದಿ, ಶಿವಮೊಗ್ಗ:
ಶಿರಾಳಕೊಪ್ಪ ಹತ್ತಿರದ ತಾಳಗುಂದದ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಯಾವುದೋ ಕುಣಿಕೆಯು ಚಿರತೆಯ ಕೊರಳಿಗೆ ಸಿಕ್ಕಿಹಾಕಿಕೊಂಡಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಬಿದ್ದು ಮೃತಪಟ್ಟಿದೆ.
ಕಳೆದ ಎರಡು ಮೂರು ದಿನಗಳ ಹಿಂದೆಯೇ ಚಿರತೆ ಸಾವನ್ನಪ್ಪಿರುವ ಸಾಧ್ಯತೆಯಿದ್ದು, ದೇಹದಿಂದ ದುರ್ವಾಸನೆ ತೀವ್ರವಾಗಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ವಿಷಯವನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಚಿರತೆ ಸುಮಾರು ನಾಲ್ಕರಿಂದ ಐದು ವರ್ಷ ವಯಸ್ಸಿನ ಗಂಡು ಚಿರತೆಯಾಗಿದ್ದು, ಘಟನೆ ಸಂಬಂಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಜಾವೀದ್ ತಿಳಿಸಿದ್ದಾರೆ. ಪ್ರಕರಣದ ಕುರಿತಂತೆ ಅರಣ್ಯ ಇಲಾಖೆ ತನಿಖೆ ಮುಂದುವರೆಸಿದೆ.

