ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ 32ನೇ ಮಹಾಶಿವರಾತ್ರಿಯನ್ನು ಅತ್ಯಂತ ಸಡಗರದಿಂದ ಆಚರಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿಯ ವಿಶೇಷವೆಂದರೆ, ಇಡೀ ಉತ್ಸವವನ್ನು ಪವಿತ್ರ ‘ಗಂಗೆ’ಯ ಥೀಮ್ ಅಡಿಯಲ್ಲಿ ಆಯೋಜಿಸಲಾಗಿದೆ.
ಫೆಬ್ರವರಿ 15ರಂದು ಸಂಜೆ 6 ಗಂಟೆಗೆ ಆರಂಭವಾಗುವ ಈ ಮಹೋತ್ಸವವು, ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ಸತತ 12 ಗಂಟೆಗಳ ಕಾಲ ನಡೆಯಲಿದೆ.
ಈ ಭವ್ಯ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಎಲ್. ಮುರುಗನ್ ಸೇರಿದಂತೆ ದೇಶದ ಹಲವು ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.
ಶಿವರಾತ್ರಿಯ ಮುನ್ನಾದಿನವಾದ ಇಂದು ರಾತ್ರಿಯೇ ವಿವಿಧ ಸಂಗೀತ ಕಾರ್ಯಕ್ರಮಗಳು ಆರಂಭವಾಗಲಿದ್ದು, ಭಕ್ತರಿಗೆ ಆಧ್ಯಾತ್ಮಿಕ ರಸದೌತಣ ನೀಡಲಿವೆ.
ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಈ ಜಾಗರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.



