ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.
ಸಿನಿಮಾ ಅನ್ನು ಸಂಗೀತ ನಿರ್ದೇಶಕ ಅರ್ಜುನ ಜನ್ಯ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಈ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ ಎಂದು ಈ ಮುಂಚೆ ಘೋಷಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾ ಬಿಡುಗಡೆ ನಿಗದಿತ ದಿನಾಂಕಕ್ಕೆ ಮಾಡಲಾಗಲಿಲ್ಲ.
ಇದೀಗ ‘45’ ಕನ್ನಡ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಕೆಲ ದೊಡ್ಡ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿದ್ದು ‘45’ ಸಿನಿಮಾಕ್ಕೆ ಪ್ರಬಲ ಸ್ಪರ್ಧೆಯನ್ನು ಬಾಕ್ಸ್ ಆಫೀಸ್ನಲ್ಲಿ ಒಡ್ಡಲಿವೆ.
ಆಗಸ್ಟ್ 15ಕ್ಕೆ ಬಿಡುಗಡೆ ಆಗಬೇಕಿದ್ದ ಈ ಸಿನಿಮಾದ ಬಿಡುಗಡೆ ತಡವಾಗಲು ವಿಎಫ್ಎಕ್ಸ್ ಕಾರಣವಂತೆ. ಅನೇಕ ಬ್ಲಾಕ್ ಬಸ್ಟರ್, ಆಸ್ಕರ್ ವಿಜೇತ ಹಾಲಿವುಡ್ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡಿರುವ ಮಾರ್ಜ್ ಸಂಸ್ಥೆ ‘45’ ಸಿನಿಮಾಕ್ಕೂ ವಿಎಫ್ಎಕ್ಸ್ ಮಾಡುತ್ತಿದ್ದು, ಸಿನಿಮಾನಲ್ಲಿ ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ ಪ್ರಮುಖವಾಗಿದ್ದು ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ಆಗಸ್ಟ್ 15 ರಂದು ಆಗಲಿಲ್ಲವಂತೆ. ಮಾರ್ಜ್ ಸಂಸ್ಥೆ ಕೆನಡಾ ಮೂಲದ್ದಾಗಿದ್ದು ಈ ಸಂಸ್ಥೆಯ ಮುಖ್ಯ ತಂತ್ರಜ್ಞ ಯಶ್ ಗೌಡ ಸಹ ಈ ಬಗ್ಗೆ ಮಾತನಾಡಿದ್ದು, ‘45’ ನಮ್ಮ ಸಂಸ್ಥೆ ವಿಎಫ್ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಆಗಿದೆ. ಸೆಪ್ಟೆಂಬರ್ 16ರ ಒಳಗೆ ಸಿನಿಮಾದ ಎಲ್ಲ ವಿಎಫ್ಎಕ್ಸ್ ಕಾರ್ಯ ಪೂರ್ಣಗೊಳ್ಳಲಿದೆ, ಅದಾದ ಒಂದು ತಿಂಗಳಲ್ಲಿ ಇನ್ನೊಂದಿಷ್ಟು ಕೆಲಸಗಳು ಇರಲಿವೆ. ಸಿನಿಮಾದ ಬಿಡುಗಡೆ ತಡವಾದರೂ ಸಿನಿಮಾದ ಗುಣಮಟ್ಟ ಅತ್ಯದ್ಭುತವಾಗಿರಲಿದೆ’ ಎಂದಿದ್ದಾರೆ.