February 8, 2026
Sunday, February 8, 2026
spot_img

ಮಗುವಿಗೆ ಜ್ವರ, ಕೆಮ್ಮು ಎಂದು ಆಸ್ಪತ್ರೆಗೆ ತೆರಳಿದ್ದಾಗ ಕಾದಿತ್ತು ಶಾಕ್: ಬಾಲಕನ ಶ್ವಾಸನಾಳದಲ್ಲಿ ಎಲ್‌ಇಡಿ ಬಲ್ಬ್ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರಂತರ ಉಸಿರಾಟದ ತೊಂದರೆ ಇದೆ ಎಂದು ಆಸ್ಪತ್ರೆಗೆ ತೆರಳಿದ್ದ ಒಂದು ವರ್ಷದ ಬಾಲಕನನ್ನು ಪರೀಕ್ಷೆ ನಡೆಸುವಾಗ ಶ್ವಾಸನಾಳದಲ್ಲಿ ಎಲ್‌ಇಡಿ ಬಲ್ಬ್ ಸಿಲುಕಿಕೊಂಡಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಮಗು ತೀವ್ರ ಜ್ವರ ಮತ್ತು ದೀರ್ಘಕಾಲದಿಂದ ಕೆಮ್ಮಿನಿಂದ ಬಳಲುತ್ತಲೇ ಇತ್ತು. ವಾರಗಳ ಕಾಲ ಚಿಕಿತ್ಸೆ ಫಲಕಾರಿಯಾಗದ ನಂತರ, ವೈದ್ಯರು ಆರಂಭದಲ್ಲಿ ಸಾಮಾನ್ಯ ಉಸಿರಾಟದ ಸೋಂಕು ಆಗಿರಬಹುದು ಎಂದು ಊಹಿಸಿದ್ದರು. ಆದರೆ, ಅದು ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಸಣ್ಣ ಎಲ್ಇಡಿ ಬಲ್ಬ್ ಎಂಬುದನ್ನು ಬಳಿಕ ಪತ್ತೆಮಾಡಿದರು.

ಆಸ್ಪತ್ರೆಯ ಇಎನ್‌ಟಿ ವಿಭಾಗದ ವೈದ್ಯರು ಕೂಲಂಕಷ ಪರೀಕ್ಷೆ ನಡೆಸಿದಾಗ ಬಾಲಕನ ಶ್ವಾಸನಾಳದಲ್ಲಿ ಅಪರಿಚಿತ ವಸ್ತುವಿನಿಂದಾಗಿ ಬಾಲಕ ಬಳಲುತ್ತಿದ್ದಾನೆ ಎಂದು ಕಂಡುಬಂದಿದೆ. ವೈದ್ಯರು ಬ್ರಾಂಕೋಸ್ಕೋಪಿ ವಿಧಾನವನ್ನು ನಡೆಸಿ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಎಲ್‌ಇಡಿ ಬಲ್ಬ್ ಅನ್ನು ಹೊರತೆಗೆದರು.

ಪರೀಕ್ಷೆಯ ಸಮಯದಲ್ಲಿ ಶ್ವಾಸನಾಳದಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ. ಎಕ್ಸ್-ರೇ ಮಾಡಿದಾಗ ಏನೋ ವಸ್ತುವಿದೆ ಎಂಬುದು ಗೋಚರಿಸಿತು. ಹೀಗಾಗಿ ಬ್ರಾಂಕೋಸ್ಕೋಪ್ ಮೂಲಕ ಪರೀಕ್ಷೆ ಮಾಡಲಾಯಿತು. ಈ ವೇಳೆ ಸಣ್ಣ ಲೋಹದ ತುಂಡುವಿನಂತೆ ಕಾಣುವ ವಸ್ತು ಗಮನಕ್ಕೆ ಬಂತು ಎಂದು ಗೋತ್ರಿಯ ಜಿಎಂಇಆರ್ಎಸ್ ಆಸ್ಪತ್ರೆಯ ಇಎನ್‌ಟಿ ಮುಖ್ಯಸ್ಥ ಡಾ. ಹಿರೇನ್ ಸೋನಿ ಹೇಳಿದ್ದಾರೆ.

ಮಗು ಒಂದೂವರೆ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಅದರ ಮೇಲೆ ಚರ್ಮ ಬೆಳೆದಿತ್ತು. ಆಧುನಿಕ ಉಪಕರಣಗಳ ಸಹಾಯದಿಂದ, ಒಂದು ಸೆಂಟಿಮೀಟರ್‌ನ ಬಲ್ಬ್ ಅನ್ನು ತೆಗೆದುಹಾಕಲು ನಮಗೆ ಸಾಧ್ಯವಾಯಿತು. ಮಗುವಿನ ಶ್ವಾಸನಾಳದಲ್ಲಿ ಎಲ್‌ಇಡಿ ಬಲ್ಬ್ ಸಿಕ್ಕಿಹಾಕಿಕೊಂಡಿತ್ತು. ಈಗ, ಬಲ್ಬ್ ಅನ್ನು ಹೊರತೆಗೆದ ನಂತರ, ಮಗು ಆರೋಗ್ಯವಾಗಿದೆ ಎಂದು ಡಾ. ಸೋನಿ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !