February 22, 2026
Sunday, February 22, 2026
spot_img

ಅಸ್ಸಾಂ ಕಾಂಗ್ರೆಸ್‌ಗೆ ಶಾಕ್: ಭೂಪೇನ್ ಕುಮಾರ್ ಬೋರಾ ಬಿಜೆಪಿ ಸೇರ್ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಸ್ಸಾಂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಭಾನುವಾರ ಆಡಳಿತಾರೂಢ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಗುವಾಹಟಿಯ ವಾಜಪೇಯಿ ಭವನದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಕ್ಷ ಸೇರ್ಪಡೆಯಾದರು. ಈ ವೇಳೆ ರಾಜ್ಯಾಧ್ಯಕ್ಷ ದಿಲೀಪ್ ಸೈಕಿಯಾ ಉಪಸ್ಥಿತರಿದ್ದರು. ಮಾಜಿ ಕಾಂಗ್ರೆಸ್ ಕಾರ್ಯಕರ್ತ ಸಂಜು ಬೋರಾ ಕೂಡ ಇದೇ ಸಂದರ್ಭದಲ್ಲೇ ಬಿಜೆಪಿ ಸೇರಿದರು.

ಇದನ್ನೂ ಓದಿ:

ಫೆಬ್ರವರಿ 16ರಂದು ಬೋರಾ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದರೂ, ಹೈಕಮಾಂಡ್ ಅದನ್ನು ತಕ್ಷಣ ಸ್ವೀಕರಿಸಿರಲಿಲ್ಲ. ಹಿರಿಯ ನಾಯಕರು ಅವರೊಂದಿಗೆ ಚರ್ಚೆ ನಡೆಸಿದ್ದು, ರಾಹುಲ್ ಗಾಂಧಿ ಸಹ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂಬ ವರದಿ ಹೊರಬಂದಿತ್ತು. ಆದರೂ ಬಳಿಕ ಅವರು ತಮ್ಮ ನಿರ್ಧಾರದಲ್ಲಿ ಅಚಲರಾಗಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರನ್ನು ಭೇಟಿ ಮಾಡಿ ಬಿಜೆಪಿ ಸೇರುವುದಾಗಿ ಘೋಷಿಸಿದ್ದರು.

126 ಸದಸ್ಯರ ಅಸ್ಸಾಂ ವಿಧಾನಸಭೆಗೆ ಮಾರ್ಚ್-ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಕಾಣಲಾಗಿದೆ. ಇದೇ ವೇಳೆ ಕಲ್ಲಿದ್ದಲು ವ್ಯಾಪಾರ ಹಗರಣದ ಆರೋಪಗಳನ್ನೂ ಬೋರಾ ತಳ್ಳಿಹಾಕಿದ್ದು, ಈ ಕುರಿತು ಪೊಲೀಸ್ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !