Thursday, January 8, 2026

ಗ್ರಾಹಕರಿಗೆ ಶಾಕ್: ಇನ್ಮುಂದೆ ಆಭರಣ ಅಂಗಡಿಗಳಿಗೆ ಹಿಜಾಬ್ ಸಹಿತ ಮುಖ ಮುಚ್ಚಿಕೊಂಡು ನೋ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌, ಹಿಜಾಬ್‌, ನಖಾಬ್‌ ಹಾಗೂ ಹೆಲ್ಮೆಟ್‌ ಧರಿಸಿ ಚಿನ್ನದ ಅಂಗಡಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ.

ಇದಲ್ಲದೆ, ಹೆಲ್ಮೆಟ್ ಅಥವಾ ಪೇಟ (ಮುರೇತಾ) ಧರಿಸಿದ ಪುರುಷರಿಗೂ ಪ್ರವೇಶವನ್ನು ನಿಷೇಧಿಸಲಾಗಿದೆ. ಆಭರಣ ವ್ಯಾಪಾರಿಗಳು ತಮ್ಮ ಅಂಗಡಿಗಳ ಹೊರಗೆ ಮಾಸ್ಕ್‌, ಬುರ್ಖಾ, ಹೆಲ್ಮೆಟ್‌ ಮತ್ತು ನಿಖಾಬ್‌ ಆವರಣದೊಳಗೆ ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುವ ನೋಟಿಸ್‌ ಹಾಕಲು ಪ್ರಾರಂಭಿಸಿದ್ದಾರೆ.

ಈ ಕ್ರಮವು ಬಿಹಾರದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಈ ನಿರ್ಧಾರವನ್ನು ಟೀಕಿಸಿದ್ದು, ಭದ್ರತೆಯ ಹೆಸರಿನಲ್ಲಿ ಹಿಜಾಬ್ ಮತ್ತು ನಿಖಾಬ್ ಅನ್ನು ಗುರಿಯಾಗಿಸಿಕೊಂಡಿರುವುದು ತಪ್ಪು ಮತ್ತು ಸಂವಿಧಾನಬಾಹಿರ ಎಂದು ಹೇಳಿದೆ.

ಟೀಕೆಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷ (ಬಿಜೆಪಿ), ‘ಇದು ಭಾರತ, ಇಸ್ಲಾಮಿಕ್ ದೇಶವಲ್ಲ. ಇಲ್ಲಿ ಹಿಜಾಬ್‌ನಿಂದ ಏನು ಪ್ರಯೋಜನ?’ ಎಂದು ಕೇಳಿದೆ. ಆದರೆ, ಈ ನಿರ್ಧಾರವು ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಆಭರಣ ವ್ಯಾಪಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಈ ಕ್ರಮವು ಸಂಪೂರ್ಣವಾಗಿ ಭದ್ರತಾ ಕಾರಣಗಳಿಗಾಗಿ ತೆಗೆದುಕೊಳ್ಳಲಾಗಿದೆ ಮತ್ತು ಯಾವುದೇ ಸಮುದಾಯ ಅಥವಾ ವರ್ಗದ ವಿರುದ್ಧವಲ್ಲ ಎಂದು ಚಿನ್ನದ ವ್ಯಾಪಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ, ಬಿಹಾರದ ಹಲವಾರು ಜಿಲ್ಲೆಗಳ ಆಭರಣ ಅಂಗಡಿಗಳಲ್ಲಿ ದರೋಡೆ ಮತ್ತು ಕಳ್ಳತನದ ಘಟನೆಗಳು ವರದಿಯಾಗಿವೆ.ಹಲವು ಪ್ರಕರಣಗಳಲ್ಲಿ, ಅಪರಾಧಿಗಳು ತಮ್ಮ ಗುರುತು ಮರೆಮಾಡಲು ಮುಖ ಮುಚ್ಚಿಕೊಂಡು ಅಂಗಡಿಗಳಿಗೆ ಪ್ರವೇಶಿಸಿ ಅಪರಾಧಗಳನ್ನು ಎಸಗಿ ಪರಾರಿಯಾಗುತ್ತಾರೆ ಎಂದು ವರದಿಯಾಗಿದೆ.

ಅಖಿಲ ಭಾರತ ಚಿನ್ನ ಮತ್ತು ಆಭರಣ ವ್ಯಾಪಾರಿಗಳ ಸಂಘದ ರಾಜ್ಯ ಅಧ್ಯಕ್ಷ ಅಶೋಕ್ ಕುಮಾರ್ ವರ್ಮಾ ಮಾತನಾಡಿ, ‘ಚಿನ್ನ-ಬೆಳ್ಳಿ ವ್ಯವಹಾರವು ಯಾವಾಗಲೂ ಅಪರಾಧಿಗಳಿಗೆ ಗುರಿಯಾಗಿತ್ತು. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಂಗಡಿಗಳಲ್ಲಿ ಲೂಟಿ ಘಟನೆಗಳು ಪ್ರತಿದಿನ ನಡೆಯುತ್ತಿವೆ. ಮುಖಗಳನ್ನು ಮುಚ್ಚಿದಾಗ, ಅಪರಾಧಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಅಂತಹ ಅಪರಾಧಗಳನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

error: Content is protected !!