ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 14 ರಂದು ನಗರದ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಗಣೇಶೋತ್ಸವದ ವೇಳೆ ಕೆಲವರು ಮದ್ಯ ಸೇವಿಸಿ ಮೆರವಣಿಗೆಗಳಲ್ಲಿ ಗಲಾಟೆಗೆ ಕಾರಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಯಶವಂತಪುರ, ಸಂಜಯನಗರ, ಜಾಲಹಳ್ಳಿ, ಆರ್‌ಎಂಸಿ ಯಾರ್ಡ್, ಜೆ.ಸಿ.ನಗರ, ಆರ್.ಟಿ.ನಗರ, ಹೆಬ್ಬಾಳ, ಸದಾಶಿವನಗರ, ತಲಘಟ್ಟಪುರ, ಸುಬ್ರಹ್ಮಣ್ಯಪುರ, ಕೆಂಗೇರಿ, ಜ್ಞಾನಭಾರತಿ, ಕುಂಬಳಗೋಡು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಗೋವಿಂದಪುರ, ಬಾಣಸವಾಡಿ, ರಾಮಮೂರ್ತಿನಗರ, ಹೆಣ್ಣೂರು, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಭಾರತಿನಗರ, ಪುಲಿಕೇಶಿನಗರ ಮತ್ತು ಹಲಸೂರು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಆದೇಶದಂತೆ CL-4 ಮತ್ತು CL-6 ಪರವಾನಿಗೆಯನ್ನು ಹೊಂದಿರುವ ಸ್ಥಳಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮದ್ಯದಂಗಡಿಗಳು ಮುಚ್ಚಲ್ಪಡಲಿವೆ. ಆದರೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವನೆಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಆಗಸ್ಟ್ 31ರ ಬೆಳಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 1ರ ಬೆಳಗ್ಗೆ 6 ಗಂಟೆಯವರೆಗೆ ಪೂರ್ವ ವಿಭಾಗದಲ್ಲಿ ಮದ್ಯ ಮಾರಾಟ ನಿಷೇಧ ಅನ್ವಯವಾಗುತ್ತದೆ. ಇದೇ ರೀತಿ ಸೆಪ್ಟೆಂಬರ್ 14ರ ಬೆಳಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 15ರ ಬೆಳಗ್ಗೆ 6 ಗಂಟೆಯವರೆಗೆ ಕಾಮಾಕ್ಷಿಪಾಳ್ಯ ಹಾಗೂ ವಿಜಯನಗರ ಪ್ರದೇಶಗಳಲ್ಲೂ ಮದ್ಯ ಮಾರಾಟ ನಿಷೇಧ ಜಾರಿಯಲ್ಲಿರಲಿದೆ.