Friday, September 5, 2025

ಟೀಮ್ ಇಂಡಿಯಾಗೆ ಶಾಕ್: ತಂಡದಿಂದ ಹೊರಬಿದ್ದ ಸ್ಟಾರ್ ವಿಕೆಟ್ ಕೀಪರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಮಹಿಳಾ ಏಕದಿನ ವಿಶ್ವಕಪ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತೀಯ ಮಹಿಳಾ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ ವಿಶ್ವಕಪ್ ಮುನ್ನವೇ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡ ಸಜ್ಜಾಗುತ್ತಿದೆ. ಆದರೆ ತಯಾರಿ ಶಿಬಿರದ ವೇಳೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ ಗಾಯಗೊಂಡಿದ್ದು, ಇದೀಗ ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಉಮಾ ಛೆಟ್ರಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ವಿಶಾಖಪಟ್ಟಣದಲ್ಲಿ ನಡೆದಿದ್ದ ತಯಾರಿ ಶಿಬಿರದ ಸಂದರ್ಭದಲ್ಲಿ ಯಾಸ್ತಿಕಾ ಭಾಟಿಯಾ ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಈ ಕಾರಣದಿಂದ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿ ಹಾಗೂ ಸೆಪ್ಟೆಂಬರ್ ಅಂತ್ಯದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ 2025 ಎರಡರಿಂದಲೂ ದೂರ ಉಳಿಯಬೇಕಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಪ್ರಸ್ತುತ ಯಾಸ್ತಿಕಾ ಅವರ ಗಾಯದ ಮೇಲ್ವಿಚಾರಣೆ ಮಾಡುತ್ತಿದ್ದು, ಶೀಘ್ರ ಚೇತರಿಕೆಗೆ ಹಾರೈಸಿದೆ.

ಯಾಸ್ತಿಕಾ ಭಾಟಿಯಾ ಗಾಯದಿಂದ ಹೊರಗುಳಿದ ಪರಿಣಾಮ ಉಮಾ ಛೆಟ್ರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಲು ಸುವರ್ಣಾವಕಾಶ ಸಿಕ್ಕಿದೆ. ಉಮಾ ಇನ್ನೂ ಭಾರತ ಪರ ಏಕದಿನ ಪಂದ್ಯವನ್ನೂ ಆಡಿಲ್ಲ. ಆದ್ದರಿಂದ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅವರು ಸಜ್ಜಾಗಿದ್ದಾರೆ.

ಬಿಸಿಸಿಐ ಪ್ರಕಟಣೆ
ಯಾಸ್ತಿಕಾ ಅವರ ಗಾಯದ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ತರಬೇತಿ ವೇಳೆ ಯಾಸ್ತಿಕಾ ಭಾಟಿಯಾ ಅವರ ಮೊಣಕಾಲಿಗೆ ಗಾಯವಾಗಿದೆ. ಅವರ ಚಿಕಿತ್ಸೆಯನ್ನು ವೈದ್ಯಕೀಯ ತಂಡ ನೋಡಿಕೊಳ್ಳುತ್ತಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ” ಎಂದು ತಿಳಿಸಿದೆ.

ಭಾರತ ತಂಡದ ಪಟ್ಟಿ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್‌ಕೀಪರ್), ಕ್ರಾಂತಿ ಗೌಡ್, ಅಮಂಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಉಮಾ ಛೆಟ್ರಿ ಮತ್ತು ಸ್ನೇಹ ರಾಣಾ.

ಇದನ್ನೂ ಓದಿ