ಹೊಸದಿಗಂತ ಬೀದರ್:
ನಗರದ ಗುಲ್ಲರ್ ಹವೇಲಿಯ ಸರ್ವೇ ನಂಬರ್ 31ರಲ್ಲಿನ ಅತಿಕ್ರಮಣದಾರರಿಗೆ ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದೆ. ಈಗಿನ ನಂದಿ ಕಾಲೋನಿ ಹಾಗೂ ಜ್ಯೋತಿ ಕಾಲೋನಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡಿರುವ 40 ನಿವಾಸಿಗಳಿಗೆ ತಕ್ಷಣ ಜಾಗ ಖಾಲಿ ಮಾಡುವಂತೆ ಸಿಕಿಂದರಾಬಾದ್‌ನ ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.

ಕಳೆದ ನವೆಂಬರ್ 28ರಂದೇ ರೈಲ್ವೆ ಇಲಾಖೆಯು (CW/277/Land cell/enchrochment/Bidar/ Sl No. 14) ಮೊದಲ ನೋಟಿಸ್ ನೀಡಿ, ಡಿಸೆಂಬರ್ 16ರ ಒಳಗಾಗಿ ಜಾಗಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿತ್ತು. ಆದರೆ, ನಿವಾಸಿಗಳಿಂದ ಸೂಕ್ತ ಸ್ಪಂದನೆ ಅಥವಾ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಇಲಾಖೆ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.

‘ಸಾರ್ವಜನಿಕ ಸ್ವತ್ತುಗಳ ಅನಧಿಕೃತ ಅತಿಕ್ರಮಣ ತೆರವು ಕಾಯ್ದೆ 1971’ರ ಸೆಕ್ಷನ್ (1) ಮತ್ತು ಸಬ್ ಸೆಕ್ಷನ್ (5)ರ ಅಡಿಯಲ್ಲಿ ಡಿಸೆಂಬರ್ 30, 2025 ರಂದು ಅಂತಿಮ ನೋಟಿಸ್ ನೀಡಲಾಗಿದ್ದು, ಸ್ವಯಂಪ್ರೇರಿತವಾಗಿ ಜಾಗ ಖಾಲಿ ಮಾಡದಿದ್ದರೆ ಅಧಿಕಾರಿಗಳೇ ಜೆಸಿಬಿ ಮೂಲಕ ಕಟ್ಟಡಗಳನ್ನು ನೆಲಸಮ ಮಾಡುವುದಾಗಿ ತಿಳಿಸಿದ್ದಾರೆ.
“ನೋಟಿಸ್‌ಗೆ ಉತ್ತರ ನೀಡುವ ಕಾಲಾವಕಾಶ ಈಗಾಗಲೇ ಮುಗಿದಿದೆ. ನಿಯಮದಂತೆ ನಾವು ಅತಿಕ್ರಮಣ ತೆರವು ಮಾಡಲೇಬೇಕಿದೆ. ಸದ್ಯದಲ್ಲೇ ಜೆಸಿಬಿಗಳೊಂದಿಗೆ ಕಾರ್ಯಾಚರಣೆ ನಡೆಸಿ ರೈಲ್ವೆ ಜಮೀನನ್ನು ವಶಪಡಿಸಿಕೊಳ್ಳಲಾಗುವುದು,” ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ದಶಕಗಳಿಂದ ಇದು ರೈಲ್ವೆ ಜಮೀನು ಎಂದು ತಿಳಿದಿದ್ದರೂ, ರಾಜಾರೋಷವಾಗಿ ಅಕ್ರಮ ಮನೆಗಳನ್ನು ನಿರ್ಮಿಸಿಕೊಂಡಿದ್ದ ನಿವಾಸಿಗಳು ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ನಿವಾಸಿಗಳು ಕಂಗಾಲಾಗಿದ್ದಾರೆ.

