ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಪಾವತಿಸದೇ ಇರುವ ವಾಣಿಜ್ಯ ಕಟ್ಟಡ ಸುಸ್ತಿದಾರರಿಗೆ ಭಾರೀ ಶಾಕ್ ಎದುರಾಗಿದೆ. ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯದಲ್ಲಿ ಸುಸ್ತಿದಾರರ 9 ವಾಣಿಜ್ಯ ಆಸ್ತಿಗಳಿಗೆ ಸೀಲ್ ಹಾಕಲಾಗಿದೆ. ಬ್ಯಾಂಕ್, ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣಗಳು ಈ ಕ್ರಮಕ್ಕೆ ಒಳಗಾಗಿವೆ.
ಪೂರ್ವ ನಗರ ಪಾಲಿಕೆ ಆಯುಕ್ತರ ಮಾರ್ಗದರ್ಶನದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ನೋಟಿಸ್ ನೀಡಿದ ನಂತರವೂ ತೆರಿಗೆ ಪಾವತಿಸದ ಮಾಲೀಕರ ಕಟ್ಟಡಗಳನ್ನು ಬೀಗ ಹಾಕಿ ಸೀಲ್ ಮಾಡಲಾಗಿದೆ. ಸೀಲ್ ಮಾಡಲಾದ ಸ್ಥಳಗಳಲ್ಲಿ ಬೆಳ್ಳಂದೂರು, ಕೈಕೊಂಡರಹಳ್ಳಿ ಮತ್ತು ಅಂಬಲಿಪುರ ಗ್ರಾಮಗಳ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣಗಳು ಸೇರಿವೆ. ಪಾಲಿಕೆ ಅಧಿಕಾರಿಗಳು ಈ ಕ್ರಮದಿಂದ ಬಾಕಿದಾರರಿಗೆ ಎಚ್ಚರಿಕೆ ನೀಡಲು ಉದ್ದೇಶಿಸಿದ್ದು, ತೆರಿಗೆ ಪಾವತಿಸುವವರೆಗೆ ಈ ಕಟ್ಟಡಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೂಚನೆಯಂತೆ, ಶೀಘ್ರದಲ್ಲಿ ಬಾಕಿದಾರರು ತೆರಿಗೆ ಪಾವತಿಸುವ ನಿರೀಕ್ಷೆಯಿದೆ. ಈ ಕ್ರಮದಿಂದ ಪಾಲಿಕೆ ಆದಾಯ ಹೆಚ್ಚುವ ಮೂಲಕ ನಗರಾಭಿವೃದ್ಧಿಗೆ ಸಹಾಯವಾಗಲಿದೆ.

