Thursday, November 13, 2025

ದೆಹಲಿ ಕಾರು ಸ್ಫೋಟ: ಗೃಹಸಚಿವ ಅಮಿತ್ ಶಾ ಮೊದಲ ಪ್ರತಿಕ್ರಿಯೆ, ತನಿಖೆಗೆ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯ ಹೃದಯಭಾಗ, ಕೆಂಪು ಕೋಟೆ ಸಮೀಪ ಇಂದು ಸಂಭವಿಸಿದ ಭೀಕರ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಗೃಹಸಚಿವರು, “ಇಂದು ಸಂಜೆ 7 ಗಂಟೆ ಸುಮಾರಿಗೆ ದೆಹಲಿಯ ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ” ಎಂದು ದೃಢಪಡಿಸಿದರು. ಈ ದುರಂತದಲ್ಲಿ ಕೆಲವು ಪಾದಚಾರಿಗಳಿಗೆ ಗಾಯಗಳಾಗಿವೆ, ಜೊತೆಗೆ ಹಲವಾರು ವಾಹನಗಳು ಹಾನಿಗೊಳಗಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತ್ವರಿತ ಪ್ರತಿಕ್ರಿಯೆ ಮತ್ತು ಉನ್ನತ ಮಟ್ಟದ ತನಿಖೆ

ಘಟನೆಯ ಮಾಹಿತಿ ಲಭ್ಯವಾದ ಕೇವಲ ಹತ್ತೇ ನಿಮಿಷಗಳಲ್ಲಿ, ದೆಹಲಿ ಕ್ರೈಂ ಬ್ರ್ಯಾಂಚ್‌ ಮತ್ತು ದೆಹಲಿ ಸ್ಪೆಷಲ್‌ ಸೆಲ್‌ನ ತಂಡಗಳು ಸ್ಥಳಕ್ಕೆ ತಲುಪಿವೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡದ ಜೊತೆಗೆ, ರಾಷ್ಟ್ರೀಯ ಭದ್ರತಾ ಪಡೆಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ತಂಡಗಳೂ ಸ್ಥಳಕ್ಕೆ ಆಗಮಿಸಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆಯನ್ನು ಪ್ರಾರಂಭಿಸಿವೆ ಎಂದು ಅಮಿತ್ ಶಾ ತಿಳಿಸಿದರು.

ಅವರು ಸುತ್ತಮುತ್ತಲ ಪ್ರದೇಶಗಳಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುವಂತೆ ಆದೇಶ ನೀಡಿದ್ದಾರೆ. “ನಾನು ದೆಹಲಿ ನಗರ ಪೊಲೀಸ್ ಮತ್ತು ವಿಶೇಷ ಸೆಲ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ. ದೆಹಲಿ ಸಿಪಿ ಮತ್ತು ವಿಶೇಷ ಶಾಖೆಯ ಉಸ್ತುವಾರಿ ಸ್ಥಳದಲ್ಲಿದ್ದಾರೆ. ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಸಂಪೂರ್ಣ ತನಿಖೆ ನಡೆಸಿ ಸಾರ್ವಜನಿಕರ ಮುಂದಿಡುತ್ತೇವೆ” ಎಂದು ಗೃಹಸಚಿವರು ಭರವಸೆ ನೀಡಿದರು.

ಇದಾದ ನಂತರ, ಘಟನಾ ಸ್ಥಳದ ಕುರಿತು ದೆಹಲಿ ಪೊಲೀಸ್ ಇಲಾಖೆ ಹಾಗೂ ವಿಶೇಷ ಘಟಕದಿಂದ ಮಾಹಿತಿ ಪಡೆದ ಅಮಿತ್ ಶಾ ಅವರು ತಕ್ಷಣವೇ ಲೋಕನಾಯಕ್ ಆಸ್ಪತ್ರೆಗೆ ಭೇಟಿ ನೀಡಿದರು. ಕಾರು ಸ್ಫೋಟದ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ವಿಚಾರಿಸಿ, ವೈದ್ಯರಿಂದ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

error: Content is protected !!