January21, 2026
Wednesday, January 21, 2026
spot_img

ಏರ್ ಇಂಡಿಯಾಗೆ ಶಾಕ್: ತಂದೆ-ಮಗಳಿಗೆ 1. 50 ಲಕ್ಷ ರೂ. ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಸೂಚನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ–ನ್ಯೂಯಾರ್ಕ್ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಸೇವಾ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ದಂಡ ವಿಧಿಸಿದೆ.

ವಿಮಾನದಲ್ಲಿನ ಅವ್ಯವಸ್ಥೆಯನ್ನು ಎತ್ತಿ ತೋರಿಸಿದ ಪ್ರಯಾಣಿಕರಾದ ತಂದೆ-ಮಗಳಿಗೆ 1. 50 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ.

ಟಿಕೆಟ್‌ಗೆ ಹೆಚ್ಚಿನ ಹಣ ಪಡೆದಿದ್ದರೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಏರ್ ಇಂಡಿಯಾ ವಿಫಲವಾಗಿದೆ ಎಂದು ಉಲ್ಲೇಖಿಸಿ ದೆಹಲಿಯ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ ಹೊರಡಿಸಿದೆ.

ತಂದೆ-ಮಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಹಾಗೂ 50 ಸಾವಿರ ರುಪಾಯಿ ನ್ಯಾಯಾಲಯ ವೆಚ್ಚವನ್ನು ಪಾವತಿಸಬೇಕು ಎಂದು ಆಯೋಗದ ಅಧ್ಯಕ್ಷೆ ಪೂನಂ ಚೌಧರಿ ಸದಸ್ಯ ಶೇಖರ್ ಚಂದ್ರ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಶೈಲೇಂದ್ರ ಭಟ್ನಾಗರ್ ಎಂಬವರು ತಮ್ಮ ಪುತ್ರಿಯೊಂದಿಗೆ 2023ರ ಸೆಪ್ಟೆಂಬರ್‌ನಲ್ಲಿ ಎಕಾನಮಿ ಕ್ಲಾಸ್ ಟಿಕೆಟ್‌ ಪಡೆದು ದೆಹಲಿ–ನ್ಯೂಯಾರ್ಕ್–ದೆಹಲಿ ವಿಮಾನದಲ್ಲಿ ಪ್ರಯಾಣ ನಡೆಸಿದ್ದರು. ಸುಮಾರು 15 ಗಂಟೆಗಳ ದೀರ್ಘ ಪ್ರಯಾಣದಲ್ಲಿ ತೀವ್ರ ತೊಂದರೆ ಅನುಭವಿಸಿದ್ದೇವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ವಿಮಾನದಲ್ಲಿ ಹಾಳಾಗಿದ್ದ ಸೀಟ್‌, ಕಾರ್ಯನಿರ್ವಹಿಸದ ಕಾಲ್ ಬಟನ್‌, ಕೆಲಸ ಮಾಡದ ಇನ್‌ಫ್ಲೈಟ್ ಎಂಟರ್‌ಟೈನ್‌ಮೆಂಟ್‌ ಸ್ಕ್ರೀನ್ ಸೇರಿದಂತೆ ಹಲವು ಸಮಸ್ಯೆಗಳನ್ನು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಅಶುದ್ಧ ಶೌಚಾಲಯ, ದುರ್ವಾಸನೆ, ಕಳಪೆ ಗುಣಮಟ್ಟದ ಆಹಾರ ಮತ್ತು ಪಾನೀಯಗಳೂ ಪ್ರಯಾಣದ ಅನುಭವವನ್ನು ಇನ್ನಷ್ಟು ಕೆಟ್ಟದಾಗಿ ಮಾಡಿತು ಎಂದು ದೂರಿನಲ್ಲಿ ಹೇಳಲಾಗಿದೆ. ಮುಖ್ಯವಾಗಿ, ಪ್ರಯಾಣದ ವೇಳೆ ಪದೇ ಪದೆ ದೂರು ನೀಡಿದರೂ ಕ್ಯಾಬಿನ್‌ ಸಿಬ್ಬಂದಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಭಟ್ನಾಗರ್ ಆರೋಪಿಸಿದ್ದು, ಇದರಿಂದ ತಂದೆ–ಮಗಳಿಗೆ ತೀವ್ರ ಮಾನಸಿಕ ವೇದನೆ ಉಂಟಾಯಿತು ಎಂದು ತಿಳಿಸಿದ್ದಾರೆ.

ಏರ್ ಇಂಡಿಯಾ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ವಿಮಾನವು ಪ್ರಯಾಣಕ್ಕೂ ಮುನ್ನ ಎಲ್ಲ ತಾಂತ್ರಿಕ ಪರಿಶೀಲನೆಗಳನ್ನು ನಿಯಮಿತವಾಗಿ ನಡೆಸಲಾಗಿತ್ತು ಎಂದು ಸ್ಪಷ್ಟಪಡಿಸಿತ್ತು. ಜತೆಗೆ ಬಿಸಿನೆಸ್ ಕ್ಲಾಸ್ ಅಪ್‌ಗ್ರೇಡ್ ಮಾಡುವ ಬೇಡಿಕೆಯನ್ನು ಸೀಟ್‌ ಕೊರತೆಯಿಂದ ನಿರಾಕರಿಸಿದ ಕಾರಣಕ್ಕೆ ಪ್ರಯಾಣಿಕರು ಈ ದೂರು ನೀಡಿದ್ದಾರೆ ಎಂಬುದಾಗಿ ಸಂಸ್ಥೆ ವಾದಿಸಿತ್ತು.

ಆಯೋಗವು ಏರ್ ಇಂಡಿಯಾದ ಈ ವಾದವನ್ನು ದುರ್ಬಲವೆಂದು ಪರಿಗಣಿಸಿದೆ. ವಿಶೇಷವಾಗಿ, ನ್ಯಾಯಾಲಯಕ್ಕೆ ಮೊರೆ ಹೋಗುವ ಮೊದಲು ಭಟ್ನಾಗರ್ ಕಳುಹಿಸಿದ್ದ ಕಾನೂನು ನೋಟಿಸ್‌ಗೆ ಏರ್ ಇಂಡಿಯಾ ಯಾವುದೇ ಉತ್ತರ ನೀಡಿರಲಿಲ್ಲ ಎಂಬುದನ್ನು ಪೀಠ ಗಮನಿಸಿದೆ.

ಅಂತಿಮ ಆದೇಶದಲ್ಲಿ, ತಂದೆ ಮತ್ತು ಮಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಧನ ಹಾಗೂ ನ್ಯಾಯಾಲಯ ವೆಚ್ಚವಾಗಿ 50 ಸಾವಿರ ರೂಪಾಯಿಯನ್ನು ಪಾವತಿಸಲು ಏರ್ ಇಂಡಿಯಾಗೆ ಸೂಚಿಸಲಾಗಿದೆ. ಆದರೆ ಟಿಕೆಟ್ ದರವಾಗಿ ಪಾವತಿಸಿದ್ದ 3.18 ಲಕ್ಷ ರುಪಾಯಿ ಸಂಪೂರ್ಣ ಮರುಪಾವತಿಗೆ ಆಯೋಗ ನಿರಾಕರಿಸಿದ್ದು, ಪ್ರಯಾಣ ಪೂರ್ಣಗೊಂಡಿರುವುದರಿಂದ ಪೂರ್ಣ ಮರುಪಾವತಿ ಸಾಧ್ಯವಿಲ್ಲ ಎಂದು ಹೇಳಿದೆ.

Must Read