ಹೊಸದಿಗಂತ ಡಿಜಿಟಲ್ ಡೆಸ್ಕ್:
ದಶಕಗಳಿಂದ ಅಂತರಾಷ್ಟ್ರೀಯ ಖ್ಯಾತಿ ಗಳಿಸಿರುವ ಬಳ್ಳಾರಿಯ ಜೀನ್ಸ್ ಉದ್ಯಮ ದೊಡ್ಡ ಸಂಕಷ್ಟವನ್ನು ಎದುರಿಸುತ್ತಿದೆ. ಪರಿಸರ ಮಾಲಿನ್ಯ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಂಭೀರ ಕ್ರಮ ಕೈಗೊಂಡಿದ್ದು, ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಜೀನ್ಸ್ ವಾಷಿಂಗ್ ನಡೆಸುತ್ತಿದ್ದ 36 ಘಟಕಗಳಿಗೆ ಬೀಗ ಹಾಕಲಾಗಿದೆ.
ಜೀನ್ಸ್ ಘಟಕಗಳಿಂದ ರಾಸಾಯನಿಕ ಮಿಶ್ರಿತ ನೀರನ್ನು ಸರಿಯಾದ ರೀತಿಯಲ್ಲಿ ಶುದ್ಧೀಕರಣ ಮಾಡದೇ ಹೊರಹಾಕಲಾಗುತ್ತಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಬಾರಿ ನೋಟಿಸ್ ನೀಡಿದರೂ ಸುಧಾರಣೆ ಕಂಡುಬರದ ಕಾರಣ, ಈ ಬಾರಿ ನೇರವಾಗಿ ವಿದ್ಯುತ್ ಸಂಪರ್ಕ ಕಡಿತ ಮಾಡಿ ಘಟಕಗಳನ್ನು ಮುಚ್ಚಲಾಗಿದೆ. ಈ ಕ್ರಮದಿಂದ ಬಳ್ಳಾರಿಯ ದೊಡ್ಡ ಉದ್ಯಮವೊಂದೇ ತಾತ್ಕಾಲಿಕವಾಗಿ ಕುಸಿತ ಎದುರಿಸುತ್ತಿದೆ.
ಬಳ್ಳಾರಿ ಜೀನ್ಸ್ ಉದ್ಯಮವನ್ನು ಅವಲಂಬಿಸಿ ನೇರವಾಗಿ ಮತ್ತು ಪರೋಕ್ಷವಾಗಿ 2 ಲಕ್ಷಕ್ಕೂ ಹೆಚ್ಚು ಮಂದಿ ಜೀವನ ನಡೆಸುತ್ತಿದ್ದಾರೆ. ಘಟಕಗಳ ಮುಚ್ಚುವಿಕೆಯಿಂದ ಕಾರ್ಮಿಕರು, ಮಧ್ಯವರ್ತಿಗಳು ಹಾಗೂ ಸಣ್ಣ ವ್ಯಾಪಾರಿಗಳು ತೀವ್ರ ಹಿನ್ನಡೆಯಲ್ಲಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಘಟಕ ಮುಚ್ಚುವ ಪ್ರಮುಖ ಕಾರಣ ಎಂದು ಉದ್ಯಮ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿವೆ.

