ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ 26ನೇ ಎಜ್ರಾ ಸ್ಟ್ರೀಟ್‌ನಲ್ಲಿ ಇಂದು ಬೆಳಗಿನ ಜಾವ ವಿದ್ಯುತ್ ಉಪಕರಣಗಳ ಗೋಡೌನ್ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಭಾರಿ ಅವಘಡ ಸಂಭವಿಸಿದೆ. ಕ್ಷಣಮಾತ್ರದಲ್ಲಿಯೇ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದ್ದು, ಪ್ರದೇಶದಾದ್ಯಂತ ದಟ್ಟ ಹೊಗೆ ಆವರಿಸಿಕೊಂಡಿದೆ.
ಅಪಾಯದ ಸುದ್ದಿ ತಿಳಿಯುತ್ತಿದ್ದಂತೆ, ಪಶ್ಚಿಮ ಬಂಗಾಳ ಅಗ್ನಿಶಾಮಕ ದಳವು ತಕ್ಷಣ ಕಾರ್ಯಾಚರಣೆಗಿಳಿದಿದೆ. ಸ್ಥಳಕ್ಕೆ 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರುವ ಪ್ರಯತ್ನ ಮುಂದುವರೆದಿವೆ. ವಿದ್ಯುತ್ ಉಪಕರಣಗಳ ಸಂಗ್ರಹದಿಂದಾಗಿ ಈ ಬೆಂಕಿ ಹೆಚ್ಚು ಹೊಗೆಯನ್ನು ಸೃಷ್ಟಿಸಿದ್ದು, ದೂರದಿಂದಲೇ ಕಪ್ಪು ಹೊಗೆಯ ದಟ್ಟ ಮೋಡ ಆವರಿಸಿರುವುದು ಸ್ಥಳೀಯರಲ್ಲಿ ಭಯ ಮೂಡಿಸಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪಶ್ಚಿಮ ಬಂಗಾಳ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ರಣವೀರ್ ಕುಮಾರ್ ಅವರು, “ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ವಿದ್ಯುತ್ ಸಾಮಗ್ರಿಗಳು ಸುಡುತ್ತಿರುವುದರಿಂದ ಭಾರೀ ಪ್ರಮಾಣದ ಹೊಗೆ ಬರುತ್ತಿದೆ,” ಎಂದು ಮಾಹಿತಿ ನೀಡಿದ್ದಾರೆ.
ಸಮಯಕ್ಕೆ ಸರಿಯಾಗಿ ಅಂಗಡಿಗಳು ತೆರೆಯದೇ ಇದ್ದುದರಿಂದ ಮತ್ತು ನಸುಕಿನ ಜಾವ ಘಟನೆ ನಡೆದ ಕಾರಣದಿಂದಾಗಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಅಗ್ನಿಶಾಮಕ ದಳ ವಿಳಂಬ ಮಾಡಿದೆ ಎಂದು ಸ್ಥಳೀಯರು ಮತ್ತು ಅಂಗಡಿ ಮಾಲೀಕರು ದೂರಿದ್ದಾರೆ. ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆ ಮಾಲೀಕರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯದಲ್ಲಿ ನೆರವಾದರು.

