ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಹಾಲೋ ಬ್ಲಾಕ್ ಕೆಳಗೆ ಬಿದ್ದು, 4 ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಹೆಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ಘಟನೆ ನಡೆದಿದ್ದು, ಮನಸ್ವಿ ಎಂಬ ಮಗು ಮೃತಪಟ್ಟಿದೆ. ಸುಬ್ಬಾರಾವ್ ಎಂಬವರಿಗೆ ಸೇರಿದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕಟ್ಟಡದ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಸಿಮೆಂಟ್ ಇಟ್ಟಿಗೆಗಳು ಕೆಳಗೆ ಬಿದ್ದಿವೆ. ಈ ಇಟ್ಟಿಗೆಗಳು ಕಟ್ಟಡದ ಪಕ್ಕದಲ್ಲೇ ಇದ್ದ ಶೀಟ್ ಮನೆಯ ಮೇಲೆ ಅಪ್ಪಳಿಸಿದ್ದು, ಮನೆಯ ಒಳಗಿದ್ದ ಮನಸ್ವಿ ಎಂಬ ನಾಲ್ಕು ವರ್ಷದ ಮಗು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದೆ.
ಈ ದುರ್ಘಟನೆಗೆ ಸಂಬಂಧಿಸಿದಂತೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಟ್ಟಡ ನಿರ್ಮಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸದಿರುವುದು ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

