Saturday, January 10, 2026

SHOCKING | ಆವರಣ ತಡೆ ಗೋಡೆ ನಿರ್ಮಾಣ ವೇಳೆ ಗುಡ್ಡ ಕುಸಿತ: ಕಾರ್ಮಿಕ ಭೂಸಮಾಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯ ಹಿಂದಿನ ಆವರಣ ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ ವಲಸೆ ಕಾರ್ಮಿಕನೋರ್ವ ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಾಪು ಸಮೀಪದ ಸೇವಂತಿಗುತ್ತು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮಂಗಳೂರಿನ ಕೂಳೂರಿನಲ್ಲಿ ವಾಸವಾಗಿರುವ ಮೂಲತ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಹನುಮಕಟ್ಟೆ ನಿವಾಸಿ ಬಾಳಪ್ಪ (35 )ಮೃತ ವ್ಯಕ್ತಿ.

ಸೇವಂತಿಗುತ್ತುವಿನಲ್ಲಿ ಗೌತಮ್ ರಾಜ್ ಎಂಬವರು ಇತ್ತೀಚಿಗೆ ಮನೆಯೊಂದನ್ನ ಖರೀದಿಸಿದ್ದರು. ಮನೆಯ ಹಿಂಭಾಗಕ್ಕೆ ತಾಗಿಕೊಂಡು ಎತ್ತರದ ಗುಡ್ಡವೊಂದಿದ್ದು ಕಳೆದ ಮಳೆಗಾಲದಲ್ಲಿ ಸುರಿದಿದ್ದ ಭಾರೀ ಮಳೆಗೆ ಗುಡ್ಡದ ಮಣ್ಣು ಕುಸಿತವಾಗಿತ್ತು. ಗೌತಮ್ ರಾಜ್ ಅವರು ಕಳೆದ ಕೆಲ ದಿನಗಳ ಹಿಂದಷ್ಟೆ ಮನೆಯ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಮಂಗಳವಾರದಂದು ಜೆಸಿಬಿ ಸಹಿತ ವಲಸೆ ಕಾರ್ಮಿಕರಾದ ಬಾಳಪ್ಪ, ಹನುಮಂತ, ಭೀಮಪ್ಪ, ಶಿವು ಎಂಬವರು ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು. ಈ ವೇಳೆ ಮನೆಯ ಹಿಂಭಾಗದ ಎತ್ತರದ ಗುಡ್ಡದ ಮಣ್ಣು ಏಕಾಏಕಿ ಕುಸಿದು ಬಿದ್ದ ಪರಿಣಾಮ ಕಾರ್ಮಿಕರಾದ ಬಾಳಪ್ಪ, ಹನುಮಂತ, ಭೀಮಪ್ಪ ಮಣ್ಣಿನಡಿ ಸಿಲುಕಿದ್ದಾರೆ. ಹನುಮಂತ ಮತ್ತು ಭೀಮಪ್ಪ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದು, ಮಣ್ಣಿನಡಿ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಳಪ್ಪನನ್ನ ಸ್ಥಳೀಯರು ಹರಸಾಹಸ ಪಟ್ಟು ಹೊರ ತೆಗೆದರೂ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಎಸ್ಡಿಆರ್ ಎಫ್, ಅಗ್ನಿಶಾಮಕ ದಳ, ಎಸಿಪಿ ವಿಜಯಕ್ರಾಂತಿ, ಉಳ್ಳಾಲ ಪೊಲೀಸ್ ನಿರೀಕ್ಷರಾದ ವಿರೂಪಾಕ್ಷ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಬಾಳಪ್ಪ ಪತ್ನಿ ಮತ್ತು ಏಕೈಕ ಗಂಡು ಮಗುವನ್ನ ಅಗಲಿದ್ದಾರೆ.

error: Content is protected !!