Monday, October 27, 2025

SHOCKING | ಕಾಸರಗೋಡು ಅನಂತಪುರ ಪ್ಲೈವುಡ್ ಕಾರ್ಖಾನೆಯಲ್ಲಿ ಭಾರೀ ಸ್ಪೋಟ: ಇಬ್ಬರು ಬಲಿ, ಹಲವರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ಕೈಗಾರಿಕಾ ಎಸ್ಟೇಟ್ ಪ್ರದೇಶದಲ್ಲಿನ ಡೆಕ್ಕೂರು ಪ್ಲೈವುಡ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಇಬ್ಬರು ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೆಸಿಬಿ ಸಹಿತ ಇನ್ನಿತರ ಯಂತ್ರೋಪಕರಣಗಳನ್ನು ಬಳಸಿ ಗಾಯಗೊಂಡ ಇತರರನ್ನು ಸುರಕ್ಷಿತವಾಗಿ ಹೊರತರುವ ಭರದಿಂದ ಸಾಗಿದೆ.
ಮೃತಪಟ್ಟ ಇಬ್ಬರು ಅನ್ಯರಾಜ್ಯ ಕಾರ್ಮಿಕರು ಎಂದು ತಿಳಿದುಬಂದಿದ್ದು, ಗುರುತು ಇನ್ನಷ್ಟೇ ಲಭ್ಯವಾಗಬೇಕಿದೆ.
ಅನಂತರಪುರ ಬಳಿಯ ಕಣ್ಣೂರು ಕುನ್ನಿಲ್ ಸಮೀಪದವಿರುವ ಈ ಕಾರ್ಖಾನೆಯಲ್ಲಿ ಬಾಯ್ಲರ್ ಏಕಾಏಕಿಯಾಗಿ ಸ್ಪೋಟಗೊಂಡು ತಕ್ಷಣ ವಿವಿಧೆಡೆಗೆ ಬೆಂಕಿ ಹತ್ತಿಕೊಂಡಿತು. ಸುಮಾರು ೩೦೦ರಷ್ಟು ಕಾರ್ಮಿಕರು ಅವಘಡದ ಸಂದರ್ಭ ಸ್ಥಳದಲ್ಲಿದ್ದರು.

ಘಟನೆಯಿಂದಾಗಿ ಪೇರಾಲು, ಕಣ್ಣೂರು, ಸಿದ್ಧಿಬಯಲು, ಅನಂತಪುರ ಆಸುಪಾಸಿನ ಪ್ರದೇಶಗಳಲ್ಲಿ ವ್ಯಾಪಕ ಕಂಪನ ಉಂಟಾಗಿದ್ದು, ಕೆಲವು ಮನೆಗಳ ಕಿಟಿಕಿ ಗಾಜುಗಳು ಪುಡಿ ಪುಡಿಯಾಗಿ ಬಿದ್ದಿವೆ. ಕಾಸರಗೋಡು, ಉಪ್ಪಳ ಸೇರಿದಂತೆ ವಿವಿಧೆಡೆಗಳ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ. ಈ ಭಾಗಕ್ಕೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ದುರ್ಘಟನೆಯಲ್ಲಿ ಇನ್ನಷ್ಟು ಮಂದಿಯ ಪ್ರಾಣಾಪಾಯ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಸ್ಪೋಟದಿಂದಾಗಿ ಕಾರ್ಖಾನೆಯು ಬಿರುಕು ಬಿಟ್ಟಿದ್ದು, ಪರಿಸರಕ್ಕೆ ಯಾರನ್ನೂ ಬಿಡಲಾಗುತ್ತಿಲ್ಲ. ಕುಂಬಳೆ ಸಹಿತ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಸ್ಥಳದಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ಧಾರೆ. ಸರಿಯಾದ ರೀತಿಯಲ್ಲಿ ಸಂರಕ್ಷಣಾ ಕಾರ್ಯ ಕೈಗೊಳ್ಳದೆ ಪೈವುಡ್ ಕಾರ್ಖಾನೆಯು ಕಾರ್ಯಾಚರಿಸುತ್ತಿತ್ತೆಂದು ಮೊದಲ ಹಂತದ ವರದಿಯಲ್ಲಿ ತಿಳಿದುಬಂದಿದೆ.

error: Content is protected !!