ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಶಾಂತಿಪುರದಲ್ಲಿ ಇಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಲಾಂಡ್ರಿ ಅಂಗಡಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಭಾರೀ ಹಾನಿ ಸಂಭವಿಸಿದೆ.
ಎಲೆಕ್ಟ್ರಾನಿಕ್ ಸಿಟಿ ಫೇಸ್ 2 ರ ವ್ಯಾಪ್ತಿಯಲ್ಲಿರುವ ಶಾಂತಿಪುರ ರಸ್ತೆಯ ಲಾಂಡ್ರಿ ಮತ್ತು ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಸಂಜೆ 7:30ರ ಸುಮಾರಿಗೆ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದ್ದು, ನೋಡನೋಡುತ್ತಿದ್ದಂತೆಯೇ ಬೆಂಕಿ ಅಂಗಡಿಯಾದ್ಯಂತ ವ್ಯಾಪಿಸಿದೆ.
ಬೆಂಕಿ ಹರಡಿದ ರಭಸಕ್ಕೆ ಲಾಂಡ್ರಿ ಅಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಅಂಗಡಿಯ ಗೋಡೆಗಳು ಛಿದ್ರಗೊಂಡಿವೆ. ಗೋಡೆಯ ಟೈಲ್ಸ್‌ಗಳು ಪುಡಿಯಾಗಿ ರಸ್ತೆಗೆ ಸಿಡಿದಿದ್ದು, ರಸ್ತೆಯಲ್ಲಿ ಚಲಿಸುತ್ತಿದ್ದ ಹಾಗೂ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿದೆ. ಸ್ಫೋಟದ ಶಬ್ದಕ್ಕೆ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದರು.
ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ, ಸ್ಫೋಟದ ರಭಸಕ್ಕೆ ಸಿಡಿದ ವಸ್ತುಗಳಿಂದಾಗಿ ರಸ್ತೆಯಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಧಾವಿಸಿವೆ. ಸಿಬ್ಬಂದಿ ಸತತ ಪರಿಶ್ರಮ ವಹಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಬೆಂಕಿ ಸಂಪೂರ್ಣವಾಗಿ ನಂದಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ.

