ಹೊಸ ದಿಗಂತ ವರದಿ, ಬೀದರ್:
ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ಬೀದರ್ ನಗರದ ಸ್ವಗೃಹದಲ್ಲಿ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಜೀವ ರಕ್ಷಕ ವೆಂಟಿಲೇಟರ್ ಮೂಲಕ ಒಂದು ವಾರ ಬೀದರ್ ನಗರದ ಗುದಗೆ ಮಲ್ಟಿ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದಾದನಂತರ ಸತತವಾಗಿ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದ ಕಾರಣ ಜನವರಿ ೧೨ ಸೋಮವಾರ ಅವರನ್ನು ನಗರದಲ್ಲಿದ್ದ ಮನೆಗೆ ಕರೆತರಲಾಗಿತ್ತು. ಮನೆಯಲ್ಲಿಯೇ ವೈದ್ಯರ ತಂಡದಿಂದ ಅವರನ್ನು ನೋಡಿಕೊಳ್ಳಲಾಗುತ್ತಿತ್ತು. ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಕುರಿತು ಮಗನಾದ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದರು. ಶುಕ್ರವಾರ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ರಾತ್ರಿ ನಿಧನರಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಮಗ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಮೊಮ್ಮಗ ಬೀದರ್ ಸಂಸದ ಸಾಗರ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಎಲ್ಲಾ ರೀತಿಯ ಕಾರ್ಯಕ್ರಮಗಳಿಂದ ದೂರ ಉಳಿದು ಮನೆಯಲ್ಲಿಯೇ ಉಳಿದುಕೊಂಡಿದ್ದರು.
ಭೀಮಣ್ಣ ಖಂಡ್ರೆಯವರ ಆರೋಗ್ಯದಲ್ಲಿ ಏರುಪೇರಾದ ವಿಷಯ ತಿಳಿಯುತ್ತಿದ್ದಂತೆ ವಿವಿಧ ಮಠಾಧೀಶರು, ಸಚಿವರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅವರ ಬೆಂಬಲಿಗರು ಕಳೆದ ಕೆಲ ದಿನಗಳಿಂದ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು.
ದಿವಂಗತ ಭೀಮಣ್ಣ ಖಂಡ್ರೆ ನಾಲ್ಕು ಸಲ ಶಾಸಕರಾಗಿ, ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಆರಂಭದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು, 1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿದ್ದರು.
ಭೀಮಣ್ಣ ಖಂಡ್ರೆಯವರಿಗೆ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಸೇರಿದಂತೆ ಇಬ್ಬರು ಪುತ್ರರು, ಐದು ಜನ ಪುತ್ರಿಯರು ಇದ್ದಾರೆ. ಪತ್ನಿ ಲಕ್ಷ್ಮೀಬಾಯಿ ಖಂಡ್ರೆ, ಗಂಡು ಮಕ್ಕಳ ಪೈಕಿ ಹಿರಿಯ ಮಗ, ಮಾಜಿ ಶಾಸಕ ವಿಜಯಕುಮಾರ್ ಖಂಡ್ರೆ ಆವರು ಅನಾರೋಗ್ಯದಿಂದ ಈ ಹಿಂದೆಯೇ ಮೃತಪಟ್ಟಿದ್ದಾರೆ.
ಇವರ ಅಂತ್ಯಕ್ರಿಯೆ ಭಾಲ್ಕಿ ಸ್ವಗ್ರಾಮದಲ್ಲಿ ಶನಿವಾರ ನಡೆಯಲಿದೆ ಎಂದು ತಿಳಿದು ಬಂದಿದೆ.


