ಹೊಸದಿಗಂತ ವರದಿ,ಅಂಕೋಲಾ:
ವೈದ್ಯರೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅವರ್ಸಾದಲ್ಲಿ ಸಂಭವಿಸಿದೆ.
ಕಾರವಾರದ ಪಿಕಳೆ ನರ್ಸಿಂಗ್ ಹೋಮ್ ಆಸ್ಪತ್ರೆಯ ವೈದ್ಯ ಡಾ.ರಾಜು ಪಿಕಳೆ ಮೃತ ವೈದ್ಯರಾಗಿದ್ದು ಅವರು ಅಂಕೋಲಾ ತಾಲೂಕಿನ ಅವರ್ಸಾದ ತಮ್ಮ ಮನೆಯ ತುಳಸಿ ಕಟ್ಟೆಯ ಎದುರು ಡಬಲ್ ಬ್ಯಾರಲ್ ಗನ್ ನಿಂದ ತಲೆಗೆ ಗುಂಡು ಹಾರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ಕಾರವಾರದ ಪಿಕಳೆ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವರು ಅವಧಿ ಮೀರಿದ ಔಷಧ ನೀಡಿರುವ ಕುರಿತಂತೆ ಆಸ್ಪತ್ರೆಯಲ್ಲಿ ವಿಡಿಯೋ ಚಿತ್ರೀಕರಣ ನಡೆಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡಲಾಗಿತ್ತು.
ಕಣ್ತಪ್ಪಿನಿಂದ ಪ್ರಮಾದ ನಡೆದಿದೆ ಎಂದು ಕ್ಷಮೆ ಕೇಳಿದ್ದ ವೈದ್ಯರು ನಂತರದ ದಿನಗಳಲ್ಲಿ ಮಾನಸಿಕವಾಗಿ ಒತ್ತಡದಲ್ಲಿದ್ದರು
ಎಂದು ಹೇಳಲಾಗುತ್ತಿದೆ.
ವೈದ್ಯರು ಶುಕ್ರವಾರ ಬೆಳಿಗ್ಗೆ ಗುಂಡು ಹಾರಿಸಿಕೊಂಡಿದ್ದು ತುಳಸಿ ಕಟ್ಟೆ ಎದುರು ಬಂದೂಕಿನೊಂದಿಗೆ ಮೃತದೇಹ ಕಂಡು ಬಂದಿದೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.


