Monday, December 15, 2025

ಅಮೆರಿಕದ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ: ಇಬ್ಬರು ಸಾವು, 8 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ರೋಡ್ ಐಲೆಂಡ್‌ನಲ್ಲಿರುವ ಪ್ರತಿಷ್ಠಿತ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಭೀಕರ ಗುಂಡಿನ ದಾಳಿಯ ಘಟನೆಯಲ್ಲಿ ಇಬ್ಬರು ದುರಂತವಾಗಿ ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಕಪ್ಪು ಬಟ್ಟೆ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ.

ಘಟನೆ ನಡೆದ ಸಮಯದಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅಂತಿಮ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದರು. ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಶಾಲೆ ಮತ್ತು ಭೌತಶಾಸ್ತ್ರ ವಿಭಾಗವನ್ನು ಹೊಂದಿರುವ ಬರಸ್ ಮತ್ತು ಹಾಲಿ ಕಟ್ಟಡದಲ್ಲಿ ಈ ದಾಳಿ ನಡೆದಿದೆ. ಎಂಜಿನಿಯರಿಂಗ್ ಪರೀಕ್ಷೆಗಳು ನಡೆಯುತ್ತಿರುವಾಗ ಶಂಕಿತನು ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಘಟನೆಯ ನಂತರ ಶಂಕಿತನನ್ನು ಇನ್ನೂ ಬಂಧಿಸಲಾಗಿಲ್ಲ. ನಗರದ ಮೇಯರ್ ಸ್ಮೈಲಿ ಅವರು ಮಾತನಾಡಿ, ಆರೋಪಿಯ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ದುರಂತದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿದೆ. ಶ್ವೇತಭವನದಲ್ಲಿ ಸಂಕ್ಷಿಪ್ತ ಭಾಷಣ ಮಾಡಿದ ಟ್ರಂಪ್, ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಮ್ಮ ಸಂತಾಪಗಳನ್ನು ತಿಳಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಈ ಆಘಾತಕಾರಿ ಘಟನೆಯು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.

error: Content is protected !!