February 2, 2026
Monday, February 2, 2026
spot_img

ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ: ನಾಲ್ವರು ಆರೋಪಿಗಳು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಜುಹು ನಿವಾಸದ ಮೇಲೆ ಭಾನುವಾರ ಮಧ್ಯರಾತ್ರಿ ಗುಂಡಿನ ದಾಳಿ ನಡೆದಿದ್ದು, ಈ ಪ್ರಕರಣದಲ್ಲಿ ಪುಣೆಯಿಂದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಾಳಿಯ ವೇಳೆ ಶೆಟ್ಟಿ ಮತ್ತು ಅವರ ಕುಟುಂಬ ಮನೆಯಲ್ಲೇ ಇದ್ದರೂ, ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜುಹುವಿನ ಶೆಟ್ಟಿ ಟವರ್‌ಗೆ ಬೈಕ್‌ನಲ್ಲಿ ಬಂದ ಬಂದೂಕುಧಾರಿ ಐದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ದಾಳಿಗೆ ಬಳಸಿದ ಬೈಕ್ ಅನ್ನು ಶೆಟ್ಟಿ ನಿವಾಸದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿ ಪತ್ತೆಹಚ್ಚಿದ್ದಾರೆ. ಬೈಕ್ ಪುಣೆ ನೋಂದಣಿಯದ್ದಾಗಿದ್ದು, ಅದು ಬಂಧಿತ ಆರೋಪಿಗಳಲ್ಲೊಬ್ಬರ ಹೆಸರಿನಲ್ಲಿ ನೋಂದಾಯಿತವಾಗಿದೆ.

ಇದನ್ನೂ ಓದಿ:

ಬಂಧಿತರನ್ನು ಸ್ವಪ್ನಿಲ್ ಸಕತ್ (23), ಸಿದ್ಧಾರ್ಥ್ ಯೆನ್‌ಪುರೆ (20), ಆದಿತ್ಯ ಗಾಯಕಿ (19) ಮತ್ತು ಸಮರ್ಥ್ ಪೊಮಾಜಿ (18) ಎಂದು ಗುರುತಿಸಲಾಗಿದೆ. ಐದನೇ ಶಂಕಿತ ಅಮನ್ ಮರೋಟೆಗೆ ನೋಟಿಸ್ ಜಾರಿ ಮಾಡಲಾಗಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಶುಭಂ ಲೋಂಕರ್ ಸಾಮಾಜಿಕ ಮಾಧ್ಯಮದಲ್ಲಿ ದಾಳಿಯ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಆದರೆ ಶೆಟ್ಟಿಗೆ ಈ ಹಿಂದೆ ಯಾವುದೇ ಬೆದರಿಕೆ ಕರೆಗಳು ಅಥವಾ ಸುಲಿಗೆ ಬೇಡಿಕೆಗಳು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೆ ಶೆಟ್ಟಿ ಅವರ ಮುಂದಿನ ಸಿನಿಮಾ ಯೋಜನೆಗಳೇ ಕಾರಣವೇ ಎಂಬುದರ ಬಗ್ಗೆ ಪೊಲೀಸರು ವಿವಿಧ ಕೋನಗಳಿಂದ ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !