ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಪ್ರತಿಷ್ಠಿತ ಬ್ರೌನ್ ವಿಶ್ವವಿದ್ಯಾಲಯ ಮತ್ತು ಎಂಐಟಿ (MIT) ಗಳಲ್ಲಿ ಇತ್ತೀಚೆಗೆ ನಡೆದ ಭೀಕರ ಗುಂಡಿನ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಶಕಗಳಿಂದ ಜಾರಿಯಲ್ಲಿದ್ದ ‘ವೈವಿಧ್ಯತೆ ವೀಸಾ ಕಾರ್ಯಕ್ರಮ’ (ಗ್ರೀನ್ ಕಾರ್ಡ್ ಲಾಟರಿ) ವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದ್ದಾರೆ.
ಇತ್ತೀಚೆಗೆ ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಶೂಟೌಟ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದರು. ಇದಾದ ಬೆನ್ನಲ್ಲೇ ಎಂಐಟಿ ಪ್ರಾಧ್ಯಾಪಕರ ಹತ್ಯೆಯಲ್ಲೂ ಪೋರ್ಚುಗೀಸ್ ಮೂಲದ ಕ್ಲಾಡಿಯೊ ನೆವ್ಸ್ ವ್ಯಾಲೆಂಟೆ (48) ಎಂಬಾತನ ಕೈವಾಡವಿರುವುದು ಬೆಳಕಿಗೆ ಬಂದಿದೆ. ಈ ವ್ಯಕ್ತಿ 2017ರಲ್ಲಿ ಇದೇ ಗ್ರೀನ್ ಕಾರ್ಡ್ ಲಾಟರಿ ಮೂಲಕ ಅಮೆರಿಕ ಪ್ರವೇಶಿಸಿ ಶಾಶ್ವತ ನಿವಾಸ ಸ್ಥಾನಮಾನ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಈ ಬಗ್ಗೆ ಮಾಹಿತಿ ನೀಡಿದ್ದು, “ಇಂತಹ ಅಪಾಯಕಾರಿ ವ್ಯಕ್ತಿಗಳು ನಮ್ಮ ದೇಶಕ್ಕೆ ಪ್ರವೇಶಿಸಲು ಅವಕಾಶ ಸಿಕ್ಕಿದ್ದೇ ತಪ್ಪು. ಅಧ್ಯಕ್ಷರ ನಿರ್ದೇಶನದಂತೆ ಈ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ,” ಎಂದು ತಿಳಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಅಫ್ಘಾನ್ ಪ್ರಜೆಯೊಬ್ಬ ನಡೆಸಿದ ದಾಳಿಯ ನಂತರವೂ ಟ್ರಂಪ್ ಆಡಳಿತವು ಕೆಲವು ದೇಶಗಳ ವಲಸೆಯ ಮೇಲೆ ನಿರ್ಬಂಧ ಹೇರಿತ್ತು.
ಏನಿದು ಗ್ರೀನ್ ಕಾರ್ಡ್ ಲಾಟರಿ?
ಅಮೆರಿಕದಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ದೇಶಗಳ ಜನರಿಗೆ ಲಾಟರಿ ಮೂಲಕ ಪೌರತ್ವ ನೀಡುವ ಉದ್ದೇಶದಿಂದ ಕಾಂಗ್ರೆಸ್ ಈ ಯೋಜನೆಯನ್ನು ರೂಪಿಸಿತ್ತು.
2025ರ ಸಾಲಿನಲ್ಲಿ ಸುಮಾರು 2 ಕೋಟಿ ಜನರು ಈ ಲಾಟರಿಗೆ ಅರ್ಜಿ ಸಲ್ಲಿಸಿದ್ದರು.
ಈ ಪೈಕಿ 1.31 ಲಕ್ಷ ಮಂದಿ ಪ್ರಾಥಮಿಕವಾಗಿ ಆಯ್ಕೆಯಾಗಿದ್ದರು.
ಈ ಲಾಟರಿ ಯೋಜನೆಯನ್ನು ಕಾಂಗ್ರೆಸ್ (ಸಂಸತ್ತು) ಕಾನೂನಿನ ಮೂಲಕ ಜಾರಿಗೆ ತಂದಿರುವುದರಿಂದ, ಟ್ರಂಪ್ ಅವರ ಈ ದಿಢೀರ್ ನಿರ್ಧಾರವು ನ್ಯಾಯಾಲಯದಲ್ಲಿ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ. ಟ್ರಂಪ್ ಮೊದಲಿನಿಂದಲೂ ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿದ್ದು, ದೇಶದ ಭದ್ರತೆಯ ದೃಷ್ಟಿಯಿಂದ ಮೆರಿಟ್ ಆಧಾರಿತ ವಲಸೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

