Wednesday, November 5, 2025

ಸಿಡ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ಗೆ ಆಪರೇಷನ್‌, ಈಗ ಹೇಗಿದೆ ಸ್ಥಿತಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶ್ರೇಯಸ್‌ ಅಯ್ಯರ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ಸರ್ಜರಿ ಬಳಿಕ ಅಯ್ಯರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅಲ್ಲದೆ ಇದೀಗ ಅವರನ್ನು ಐಸಿಯುನಿಂದ ವಾರ್ಡ್​​ಗೆ ಶಿಫ್ಟ್ ಮಾಡಿ ಚಿಕಿತ್ಸೆ ಮುಂದುವರೆಸಲಾಗಿದೆ. ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್​ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು.

ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಪೆಟ್ಟಾಗಿದೆ. ಇದರಿಂದ ಅವರ ಪೆಕ್ಕೆಲುಬಿನ ಮೇಲ್ಭಾಗದ ಅಂಗದಲ್ಲಿ (ಗುಲ್ಮ) ಆಂತರಿಕ ರಕ್ತಸ್ರಾವವಾಗಿತ್ತು. ಇದರಿಂದಾಗಿ ಅವರು ಅಸ್ವಸ್ಥರಾಗಿದ್ದರು.

ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಶ್ರೇಯಸ್ ಅಯ್ಯರ್ ಅವರ ಗುಲ್ಮದ ಭಾಗವು ಛಿದ್ರವಾಗಿರುವುದು ಕಂಡು ಬಂದಿದೆ. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಸರ್ಜರಿಯ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದು, ಯಾವುದೇ ರೀತಿಯಲ್ಲೂ ಆತಂಕ ಪಡುವ ಅಗತ್ಯವಿಲ್ಲ ಎಂದು ಶ್ರೇಯಸ್ ಅಯ್ಯರ್ ಆಪ್ತರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿರುವುದರಿಂದ ಅಯ್ಯರ್ ಅವರಿಗೆ ಕನಿಷ್ಠ ಐದು ದಿನಗಳು, ಬಹುಶಃ ಒಂದು ವಾರದವರೆಗೆ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಸದ್ಯ ಸಿಡ್ನಿ ವೈದ್ಯರು ಹಾಗೂ ಭಾರತೀಯ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುವ ಶ್ರೇಯಸ್ ಅಯ್ಯರ್ ಶೀಘ್ರದಲ್ಲೇ ಗುಣಮುಖರಾಗಿ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.

error: Content is protected !!