ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕ್ಸಿಯಮ್-4 ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿದ್ದ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಭಾರತೀಯ ಗಗನಯಾತ್ರಿಗೆ ಪ್ರಧಾನಿ ಮೋದಿ ಅಪ್ಪುಗೆಯ ಸ್ವಾಗತ ನೀಡಿದ್ದಾರೆ.
ಪ್ರಧಾನಿ ಅಧಿಕೃತ ಕಚೇರಿಗೆ ಭೇಟಿ ನೀಡಿದ ಶುಭಾಂಶು ಶುಕ್ಲಾ ಅವರನ್ನು, ನರೇಂದ್ರ ಮೋದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಶುಭಾಂಶು ಶುಕ್ಲಾ ಅವರನ್ನು, ‘ಭಾರತದ ಬಾಹ್ಯಾಕಾಶ ಯೋಜನೆಯ ಪ್ರತಿನಿಧಿ’ ಎಂದು ಪ್ರಧಾನಿ ಮೋದಿ ಕೊಂಡಾಡಿದರು.
ಈ ವೇಳೆ ಪ್ರಧಾನಿ ಮೋದಿ ಅವರು, ಶುಭಾಂಶು ಶುಕ್ಲಾ ಅವರಿಂದ ಆಕ್ಸಿಯಮ್-4 ಬಾಹ್ಯಾಕಾಶ ಕಾರ್ಯಾಚರಣೆಯ ವಿವರ ಪಡೆದುಕೊಂಡರು.
ಇದೇ ವೇಳೆ ಶುಭಾಂಶು ಶುಕ್ಲಾ ಅವರು ಪ್ರಧಾನಿ ಮೋದಿ ಅವರಿಗೆ, ಆಕ್ಸಿಯಮ್ -4 ಮಿಷನ್ ಪ್ಯಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಈ ಉಡುಗೊರೆಯನ್ನು ಅತ್ಯಂತ ಸಂತಸದಿಂದ ಸ್ವೀಕರಿಸಿದರು.
ತಮ್ಮ ಭೇಟಿಯ ಸಂದರ್ಭದಲ್ಲಿಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, ಅಂತಾರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ದಿಂದ ಕ್ಲಿಕ್ಕಿಸಿದ ಭೂಮಿಯ ಚಿತ್ರಗಳನ್ನು ಪ್ರಧಾನಿ ಮೋದಿ ಅವರಿಗೆ ತೋರಿಸಿದರು.
ಐಎಸ್‌ಎಸ್‌ನ ಗಾಜಿನ ಗುಮ್ಮಟದಿಂದ ಭೂಮಿಯ ದರ್ಶನ ಪಡೆದ ತಮ್ಮ ಅನುಭವಗಳನ್ನು ಪ್ರಧಾನಿ ಮೋದಿ ಅವರೊಂದಿಗೆ ಹಂಚಿಕೊಂಡ ಶುಭಾಂಶು ಶುಕ್ಲಾ, ‘ಬಾಹ್ಯಾಕಾಶದಿಂದ ಭಾರತವನ್ನು ನೋಡುವುದು ರೋಮಾಂಚನಕಾರಿ ಅನುಭವ’ ಎಂದು ಹೇಳಿದರು.
ಕಳೆದ ಜೂನ್ 25ರಂದು ಅಮೆರಿಕದ ಫ್ಲೋರಿಡಾದಿಂದ ಉಡಾವಣೆಗೊಂಡಿದ್ದ ಸ್ಪೇಸ್ ಎಕ್ಸ್‌ನ ಫಾಲ್ಕನ್-9 ರಾಕೆಟ್, ಜೂನ್ 26ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. ಆಕ್ಸಿಯಮ್ -4 ಖಾಸಗಿ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿದ್ದ ಶುಭಾಂಶು ಶುಕ್ಲಾ, ಒಟ್ಟು 18 ದಿನಗಳ ಕಾಲ ಐಎಸ್‌ಎಸ್‌ನಲ್ಲಿ ವಿವಿಧ ಸಂಶೋಧನೆಗಳನ್ನು ನಡೆಸಿದ್ದರು.
ಆಕ್ಸಿಯಮ್-4 ಗಗನಯಾತ್ರಿಗಳ ತಂಡ, ಕಳೆದ ಜುಲೈ 15ರಂದು ಭೂಮಿಗೆ ಸುರಕ್ಷಿತವಾಗಿ ಮರಳಿತ್ತು. ಭೂಮಿಗೆ ಮರಳಿದ ಬಳಿಕ ಕ್ವಾರಂಟೈನ್‌ಗೆ ಗುರಿಯಾಗಿದ್ದ ಶುಭಾಂಶು ಶುಕ್ಲಾ, ನಿನ್ನೆ (ಆ.17-ಭಾನುವಾರ) ಭಾರತಕ್ಕೆ ವಾಪ್ಸಾಗಿದ್ದರು.