February 4, 2026
Wednesday, February 4, 2026
spot_img

ಭ್ರಷ್ಟಾಚಾರದ ಸುಳಿಯಲ್ಲಿ ಸಿದ್ದರಾಮಯ್ಯ ಸರ್ಕಾರ: ಮೌನ ಮುರಿಯದಿದ್ದರೆ ಹೋರಾಟದ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 6 ಸಾವಿರ ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಪ್ರತಿಭಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

“ಸಿದ್ದರಾಮಯ್ಯ ಸರ್ಕಾರ ಹಗರಣಗಳ ಅಲೆಯಲ್ಲಿ ಸಿಲುಕಿದೆ. ಲಿಕ್ಕರ್ ಲೈಸೆನ್ಸ್ ನೀಡುವಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಲಂಚ ಪಡೆಯಲಾಗುತ್ತಿದೆ. ಅಬಕಾರಿ ಇಲಾಖೆಯಷ್ಟು ಭ್ರಷ್ಟಾಚಾರ ಬೇರೆಲ್ಲೂ ಕಂಡಿಲ್ಲ,” ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಹಿಂದೆ ಸಚಿವ ಕೆ.ಜೆ. ಜಾರ್ಜ್ ಅವರು ರಾಜೀನಾಮೆ ನೀಡಿದ ಮಾದರಿಯಲ್ಲೇ, ಈಗ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಕೂಡಲೇ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತನಿಖೆ ಮುಗಿಯುವವರೆಗೂ ಅವರು ಅಧಿಕಾರದಿಂದ ದೂರವಿರಲಿ ಎಂದು ವಿಜಯೇಂದ್ರ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಆರ್. ಅಶೋಕ್, “6 ಸಾವಿರ ಕೋಟಿ ಲೂಟಿಯಾಗಿದೆ ಎಂದು ನಾವು ಸುಮ್ಮನೆ ಹೇಳುತ್ತಿಲ್ಲ. ಅದಕ್ಕೆ ಪೂರಕವಾದ 5 ಪ್ರಮುಖ ದಾಖಲೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಇಷ್ಟಾದರೂ ಮುಖ್ಯಮಂತ್ರಿಗಳು ಮೌನವಾಗಿರುವುದು ಏಕೆ?” ಎಂದು ಪ್ರಶ್ನಿಸಿದರು.

ಸರ್ಕಾರ ತಕ್ಷಣವೇ ಸಚಿವರ ರಾಜೀನಾಮೆ ಪಡೆಯದಿದ್ದರೆ, ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !