Friday, November 7, 2025

ಕೇಂದ್ರದತ್ತ ಸಿದ್ದರಾಮಯ್ಯ ಬೊಟ್ಟು: ಕಬ್ಬು ಬೆಲೆ ಬಿಕ್ಕಟ್ಟು, ರೈತರ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಪ್ರತಿ ಕ್ವಿಂಟಾಲ್‌ಗೆ ₹3,500 ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ಪಟ್ಟು ಹಿಡಿದಿದ್ದಾರೆ. ಈ ಗಂಭೀರ ವಿಚಾರವು ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಗೆ ಗ್ರಾಸವಾಯಿತು.

ಆದರೆ, ಸಂಪುಟ ಸಭೆಯ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಬೇಡಿಕೆ ಈಡೇರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. “FRP ನಿಗದಿ ಮಾಡುವವರು ಕೇಂದ್ರ ಸರ್ಕಾರದವರು. ಪ್ರತಿ ವರ್ಷ ಕೇಂದ್ರವೇ ದರವನ್ನು ನಿಗದಿ ಮಾಡುತ್ತದೆ,” ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ನೇರವಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದರು.

ಈ ಮೂಲಕ ಸದ್ಯಕ್ಕೆ ರೈತರ ಬೇಡಿಕೆಗಳನ್ನು ಈಡೇರಿಸುವ ಯಾವುದೇ ಭರವಸೆ ನೀಡದೆ, ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸದೇ “ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ” ಮಾತನಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಿಎಂ ಹೇಳಿದ್ದೇನು?

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ರೈತರ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

“ಕಬ್ಬು ನಿಯಂತ್ರಣ ಕಾಯ್ದೆಯನ್ವಯ ಎಫ್‌ಆರ್‌ಪಿ ದರವನ್ನು ತೀರ್ಮಾನ ಮಾಡಬೇಕಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರ ಅಲ್ಲ. ಕಾಯಿದೆಯನ್ನು ಜಾರಿಗೆ ತರುವುದು ಮಾತ್ರ ರಾಜ್ಯ ಸರ್ಕಾರದ ಕೆಲಸವಾಗಿದೆ,” ಎಂದು ಸ್ಪಷ್ಟಪಡಿಸಿದರು. ಕಾರ್ಖಾನೆಗಳು ಸರಿಯಾದ ತೂಕ ನೀಡುತ್ತಿವೆಯೇ ಮತ್ತು ನಿಗದಿತ ಸಮಯದಲ್ಲಿ ಹಣ ಪಾವತಿ ಮಾಡುತ್ತಿವೆಯೇ ಎಂಬುದನ್ನು ಮಾತ್ರ ರಾಜ್ಯ ಸರ್ಕಾರ ಪರಿಶೀಲಿಸುತ್ತದೆ ಎಂದರು.

ಕೇಂದ್ರ ನಿಗದಿಪಡಿಸಿದ ದರ: ಪ್ರಸ್ತುತ, 10.25% ರಿಕವರಿ ಇರುವ ಪ್ರತಿ ಟನ್‌ಗೆ ₹3,550 ನಿಗದಿಪಡಿಸಲಾಗಿದೆ. ಇದರಲ್ಲಿ ಕಟಾವು ಮತ್ತು ಸಾರಿಗೆ ವೆಚ್ಚವೂ ಸೇರಿದೆ.

ರಿಕವರಿ ಹೆಚ್ಚಳಕ್ಕೆ ದರ: 10.25%ಕ್ಕಿಂತ ರಿಕವರಿ ಜಾಸ್ತಿ ಇದ್ದರೆ ಪ್ರತಿ ಕ್ವಿಂಟಾಲ್‌ಗೆ ₹3.46 ನಿಗದಿ.

ರಿಕವರಿ ಕಡಿಮೆ ಇದ್ದರೆ ದರ: ರಿಕವರಿ 9.5%ಗಿಂತ ಕಡಿಮೆ ಇದ್ದರೆ ಪ್ರತಿ ಟನ್‌ಗೆ ₹3,290.50 ನೀಡಬೇಕು.

ಸದ್ಯಕ್ಕೆ ರಾಜ್ಯ ಸರ್ಕಾರದ ಕಡೆಯಿಂದ ಯಾವುದೇ ಪರಿಹಾರ ದೊರೆಯದ ಕಾರಣ, ಬೆಳಗಾವಿ ಭಾಗದ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

error: Content is protected !!