ಹೊಸದಿಗಂತ ಬೆಳಗಾವಿ:
ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 17ನೇ ಬಾರಿಗೆ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ಕನ್ನಡ ಚಿತ್ರರಂಗದ ದಶಕಗಳ ಕನಸಾದ ‘ಫಿಲ್ಮ್ ಸಿಟಿ’ ಯೋಜನೆಗೆ ಮರುಜೀವ ನೀಡಲಾಗಿದ್ದು, ಕಲಾ ಲೋಕಕ್ಕೆ ಹಲವು ಆಕರ್ಷಕ ಯೋಜನೆಗಳನ್ನು ಘೋಷಿಸಲಾಗಿದೆ.
ಬಜೆಟ್‌ನಲ್ಲಿ ಚಿತ್ರರಂಗಕ್ಕೆ ಸಿಕ್ಕಿದ್ದೇನು?
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಸಿಟಿ ನಿರ್ಮಿಸಲು 500 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು ಕೇವಲ ಚಿತ್ರೀಕರಣಕ್ಕೆ ಸೀಮಿತವಾಗದೆ, ಪ್ರವಾಸಿಗರನ್ನು ಆಕರ್ಷಿಸಲು ಥೀಮ್ ಪಾರ್ಕ್, ಸ್ಟಾರ್ ಹೋಟೆಲ್ ಹಾಗೂ ರೆಸಾರ್ಟ್‌ಗಳನ್ನು ಒಳಗೊಂಡಿರಲಿದೆ. ಈ ಬೃಹತ್ ಯೋಜನೆಯನ್ನು PPP ಮಾದರಿಯಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.
ಚಿತ್ರೀಕರಣಕ್ಕೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವ ಕಿರಿಕಿರಿ ಇನ್ನು ತಪ್ಪಲಿದೆ. ಚಿತ್ರರಂಗದ ಅನುಕೂಲಕ್ಕಾಗಿ ‘ಸಿನಿ ಮಿತ್ರ’ ಎಂಬ ಆನ್‌ಲೈನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆರಂಭಿಸಲಾಗುತ್ತಿದ್ದು, ಒಂದೇ ವೇದಿಕೆಯಲ್ಲಿ ಎಲ್ಲಾ ಪರವಾನಗಿಗಳು ಲಭ್ಯವಾಗಲಿವೆ.
ಕಳೆದ ಕೆಲವು ವರ್ಷಗಳಿಂದ ಬಾಕಿ ಉಳಿದಿದ್ದ ಗುಣಾತ್ಮಕ ಚಲನಚಿತ್ರಗಳ ಸಹಾಯಧನ ವಿತರಣೆಗೆ ಸಿಎಂ ಚಾಲನೆ ನೀಡಿದ್ದಾರೆ. ಬಾಕಿ ಇರುವ ಮೂರು ವರ್ಷಗಳ ಚಿತ್ರಗಳ ಆಯ್ಕೆ ಪ್ರಕ್ರಿಯೆ ಮುಗಿಸಿ, ಸಹಾಯಧನ ನೀಡಲು 20 ಕೋಟಿ ರೂ. ಮೀಸಲಿಡಲಾಗಿದೆ.
ಹೆಸರಘಟ್ಟದ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಸೌಂಡ್ ರೆಕಾರ್ಡಿಂಗ್ ಹಾಗೂ ಸಿನಿಮಾಟೊಗ್ರಫಿ ವಿಭಾಗಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸಲು ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗಿದೆ.
ಕನ್ನಡದ ಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿ, ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.



