ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡೂರು ಪಟ್ಟಣದ ಆಲಘಟ್ಟ ಗ್ರಾಮದಲ್ಲಿ ವರದಕ್ಷಿಣೆ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿ ಭಾರತಿ (28) ಯನ್ನು ಕೊಲೆ ಮಾಡಿ ಕೊಳವೆ ಬಾವಿಯಲ್ಲಿ ಹೂತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡ ಮಹಿಳೆಯ ಮೃತದೇಹವನ್ನು ಹೊರತೆಗೆದಿದೆ.
ಕಳೆದ ಒಂದೂವರೆ ತಿಂಗಳ ಹಿಂದೆ ಆರೋಪಿ ವಿಜಯ್ ತನ್ನದೇ ತೋಟದಲ್ಲಿದ್ದ, ನೀರು ಬಂದಿದ್ದ ಕೊಳವೆ ಬಾವಿಯೊಳಗೆ ಭಾರತಿಯನ್ನು ಕೊಂದು ಹೂತಿದ್ದ. ಯಾರಿಗೂ ತಿಳಿಯಬಾರದೆಂದು ಬಾವಿಯೊಳಗೆ ಗೋಣಿಚೀಲ, ಮರಳು ಹಾಕಿ ಮುಚ್ಚಿಹಾಕಿದ್ದ. ಅಷ್ಟೇ ಅಲ್ಲದೆ, ಪತ್ನಿ ಎಲ್ಲೋ ಹೋಗಿದ್ದಾಳೆ ಎಂದು ನಾಟಕವಾಡಿ, ‘ನನ್ನ ಪತ್ನಿ ಮಾನಸಿಕ ಅಸ್ವಸ್ಥೆ, ಎಲ್ಲೋ ಹೋಗಿದ್ದಾಳೆ, ಹುಡುಕಿಕೊಡಿ’ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ಆತನೇ ದೂರು ಕೂಡ ನೀಡಿದ್ದ.
ಪೊಲೀಸರ ತೀವ್ರ ತನಿಖೆ: ಗಂಡನೇ ಹಂತಕ
ಒಂದೂವರೆ ತಿಂಗಳಿನಿಂದ ಪೊಲೀಸರು ಈ ಪ್ರಕರಣದ ಹಿಂದೆ ಬಿದ್ದಿದ್ದರು. ಪೊಲೀಸರ ತೀವ್ರ ಮತ್ತು ಸೂಕ್ಷ್ಮ ತನಿಖೆಯಿಂದಾಗಿ ಕೊಲೆ ಮಾಡಿದವನು ಪತ್ನಿಯ ಗಂಡನೇ ಎಂದು ತಿಳಿದುಬಂದಿದೆ. ನಂತರ ಪೊಲೀಸರು ವಿಜಯ್, ಆತನ ಅತ್ತೆ ಮತ್ತು ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಆಘಾತಕಾರಿ ಅಂಶಗಳು ಬಯಲಾಗಿವೆ: ಭಾರತಿಯ ಹತ್ಯೆಯ ನಂತರ, ಕೇಸ್ ಪತ್ತೆಯಾಗಬಾರದು, ಭಾರತಿ ದೆವ್ವ-ಪಿಶಾಚಿ ಆಗಬಾರದು ಮತ್ತು ಕೋರ್ಟಿನಲ್ಲಿ ಕೇಸ್ ನಿಲ್ಲಬಾರದು ಎಂಬ ಮೌಢ್ಯದ ಕಾರಣಕ್ಕೆ ಆರೋಪಿ ವಿಜಯ್ ದೇವರಿಗೆ ಮೂರು ಪ್ರಾಣಿ ಬಲಿ ನೀಡಿದ್ದ. ಜೊತೆಗೆ, ಕಬ್ಬಿಣದ ತಗಡಿನಲ್ಲಿ ಪತ್ನಿಯ ಹೆಸರು ಬರೆದು, ಫೋಟೋ ಇರಿಸಿ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಸಂಗತಿ ತಿಳಿದುಬಂದಿದೆ.
12 ಅಡಿ ಆಳದಲ್ಲಿ ಮೃತದೇಹ ಪತ್ತೆ, ಕುಟುಂಬಕ್ಕೆ ಹಸ್ತಾಂತರ
ತಹಶೀಲ್ದಾರ್, ಡಿವೈಎಸ್ಪಿ, ಪಿಎಸ್‌ಐ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳ ಸಮ್ಮುಖದಲ್ಲಿ ಕೊಳವೆ ಬಾವಿಯಲ್ಲಿ ಶವವನ್ನು ಹೊರತೆಗೆಯಲಾಗಿದೆ. ಬಾವಿಯ 12 ಅಡಿ ಆಳದಲ್ಲಿ ಭಾರತಿಯ ಮೃತದೇಹ ಪತ್ತೆಯಾಗಿದೆ. ಎಫ್‌ಎಸ್‌ಎಲ್ ಅಧಿಕಾರಿಗಳು ತನಿಖೆಗೆ ಬೇಕಾದ ಅಗತ್ಯ ಅಂಗಾಂಗಳನ್ನು ಸಂಗ್ರಹಿಸಿದ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಿದರು.
ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ವಿಜಯ್ ಮತ್ತು ಭಾರತಿ ದಂಪತಿಗೆ 6 ವರ್ಷದ ಒಂದು ಮಗು ಕೂಡ ಇದೆ. ಆರ್ಥಿಕವಾಗಿ ಸದೃಢನಾಗಿದ್ದ ವಿಜಯ್‌ಗೆ, ಮದುವೆ ವೇಳೆ ಭಾರತಿ ಕುಟುಂಬಸ್ಥರು ಕಾರು, ಬೈಕ್, ಉಂಗುರ, ಬ್ರಾಸ್ಲೈಟ್, ಚೈನ್ ಸೇರಿದಂತೆ ಸುಮಾರು ರೂ. 15 ರಿಂದ 20 ಲಕ್ಷ ಖರ್ಚು ಮಾಡಿ ವಿವಾಹ ಮಾಡಿದ್ದರು. ಆದರೂ, ವಿಜಯ್ ವರದಕ್ಷಿಣೆ ವಿಚಾರವಾಗಿ ಹಲವು ಬಾರಿ ಪತ್ನಿ ಮೇಲೆ ಹಲ್ಲೆ ಮಾಡಿ ತವರಿಗೆ ಕಳುಹಿಸಿದ್ದ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ.