ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಿಗಮಪ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದ ಪ್ರತಿಭಾವಂತ ಹಾಡುಗಾರ್ತಿ ಸುಹಾನಾ ಸಯ್ಯದ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 16 ವರ್ಷಗಳ ಕಾಲ ಪ್ರೀತಿಸಿ ಬಂದ ರಂಗಭೂಮಿ ಕಲಾವಿದ ನಿತಿನ್ ಅವರ ಜೊತೆ ಅವರು ವಿವಾಹವಾಗಿದ್ದು, ಸುಹಾನಾ ವಧುವಾಗಿ ಮಿಂಚಿದ್ದಾರೆ.
ಸಂಗೀತ ಲೋಕದಲ್ಲಿ ತಮ್ಮ ಅದ್ಭುತ ಧ್ವನಿಯಿಂದ ಹೆಸರು ಮಾಡಿದ್ದ ಸುಹಾನಾ, ಹಿಂದು ಭಕ್ತಿಗೀತೆಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಆಗ ಅವರ ಮೇಲೆ ಕೆಲ ವಿರೋಧದ ಧ್ವನಿಗಳೂ ಕೇಳಿಬಂದಿದ್ದರೂ, ಸುಹಾನಾ ತಮ್ಮ ದಿಟ್ಟತನದಿಂದ ಎಲ್ಲರ ಗೌರವವನ್ನು ಗಳಿಸಿದ್ದರು. ಈಗ ಅವರು ಜೀವನದ ಹೊಸ ಹಾದಿಯಲ್ಲಿ ಕಾಲಿಡುತ್ತಿದ್ದರೆ, ಅಭಿಮಾನಿಗಳಿಂದ ಹಾರೈಕೆಗಳ ಸುರಿಮಳೆ ಬೀಳುತ್ತಿದೆ. ಈ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.
ವಿವಾಹದ ಕುರಿತು ಸುಹಾನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವನಾತ್ಮಕ ಪೋಸ್ಟ್‌ನಲ್ಲಿ, “ಪ್ರತಿ ಜೀವಿಯ ಹಾದಿ ಪ್ರೇಮಕ್ಕಾಗಿಯೇ ಸಾಗುತ್ತದೆ. ಪ್ರೇಮಕ್ಕೆ ಕಾರಣವಿಲ್ಲ, ಮಿತಿಯಿಲ್ಲ. ಈ ಪ್ರೀತಿಯೇ ನಮ್ಮ ಜೀವನದ ನಿಜವಾದ ಪಯಣ. ಇಂದು ನಮ್ಮ ಈ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ, ನಿಮ್ಮ ಆಶೀರ್ವಾದ ಸದಾ ಇರಲಿ” ಎಂದು ಬರೆದಿದ್ದಾರೆ.